Tuesday, January 14, 2014

ಸಾಯಿಸೋದಷ್ಟೇ ಅಲ್ಲ… ಹುಟ್ಟಿಸೋದೂ ಅಪರಾಧವೇ…!

ಅವಧಿಯಲ್ಲಿ 13-01-2014ರಂದು ಪ್ರಕಟಗೊಂಡ "ನನ್ನನ್ನು ಕಾಡಿದ ಸಿನಿಮಾ" ಬೋಲ್ ಕುರಿತ ನನ್ನ ಅನಿಸಿಕೆ...

 

ಸಾಯಿಸೋದಷ್ಟೇ ಅಲ್ಲ… ಹುಟ್ಟಿಸೋದೂ ಅಪರಾಧವೇ…!

ನವೀನ್ ಕುಮಾರ್ ಕೆ

ನಾಯಕಿಯ ಕ್ಷಮಾದಾನವನ್ನು ರಾಷ್ಟ್ರಪತಿಗಳು ತಿರಸ್ಕರಿಸಿ ಆಕೆಗೆ ವಿಧಿಸಿರುವ ಗಲ್ಲುಶಿಕ್ಷೆ ಜಾರಿಗೊಳಿಸಲು ಆದೇಶಿಸುವುದರೊಂದಿಗೆ ಶುರುವಾಗುವ ಸಿನಿಮಾ ಉರ್ದು ಭಾಷೆಯ ಬೋಲ್. ಪಕಿಸ್ತಾನದಲ್ಲಿ 24 ಜೂನ್ 2011, ರಂದು ಬಿಡುಗಡೆಗೊಂಡು ಬಕ್ಸ್ ಆಫೀಸ್ನ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಯಶಸ್ಸು ಪಡೆದ ಸಿನಿಮಾ ಇದು.
ಚಿತ್ರದ ನಾಯಕಿ ಜೈನಾಬ್ (ಹುಮೈಮಾ ಮಲ್ಲಿಕ್)ಳ ಕ್ಷಮಾದಾನ ಅರ್ಜಿ ವಜಾಗೊಂಡಾಗ ಆಕೆಯ ಕೊನೆ ಇಚ್ಛೆಯಾಗಿ ಮಾಧ್ಯಮಗಳ ಎದುರು ತನ್ನ ಜೀವನದ ಕಥೆಯನ್ನು ಹೇಳಲು ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿರುತ್ತಾಳೆ. ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದು ಜೈನಾಬ್ ತನ್ನ ಕಥೆಯನ್ನು ಹೇಳುವುದರೊಂದಿಗೆ ಈ ಚಿತ್ರ ಪ್ರಾರಂಭಗೊಳ್ಳುತ್ತದೆ. ಒಟ್ಟು ಏಳು ಜನ ಅಕ್ಕ-ತಂಗಿಯರು ಮತ್ತು ತಂದೆ ತಾಯಿಯ ಈ ಸಂಸಾರದ ಕಥೆ ಇನ್ನೊಂದು ಮಗುವಿನ ಜನನದೊಂದಿಗೆ ಇನ್ನಷ್ಟು ಕರುಣಾಜನಕವಾಗುತ್ತಾ ಹೋಗುತ್ತದೆ. ಲಕನೌದ ನವಾಬ್ ಮನೆತದವರಾದ ಹಕೀಮ್ ಸಾಬ್(ಮಂಜರ್ ಸೆಹಬಾಯ್)ನ ಅಜ್ಜ ಭಾರತ ಪಾಕಿಸ್ತಾನ ಇಬ್ಭಾಗವಾದಾಗ ಲಾಹೋರನಲ್ಲೇ ಉಳಿದುಬಿಡುತ್ತಾರೆ. ಅಲ್ಲೇ ತನ್ನದೊಂದು ಪಾರಂಪರಿಕ ಔಷಧಿಯ ಅಂಗಡಿ ಮತ್ತು ಮನೆಯನ್ನು ಮಾಡಿಕೊಂಡು ನೆಲೆಗೊಳ್ಳುತ್ತಾರೆ. ಇದೇ ವೃತ್ತಿಯನ್ನು ಮುಂದುವರೆಸುವ ಹಕೀಮ್ ಸಾಬ್ ತನ್ನ ಆಥರ್ಿಕ ಸ್ಥಿತಿ ಸುಧಾರಿಸಬೇಕಾದರೆ ತನಗೊಂದು ಗಂಡು ಮಗುಬೇಕು ಎಂದು ಪದೇ ಪದೇ ಪ್ರಯತ್ನ ಪಡುತ್ತಲೇ ಇರುತ್ತಾನೆ. ಆದರೆ ಪ್ರತಿ ಸಾರಿಯೂ ಹೆಣ್ಣು ಶಿಶುಗಳ ಜನನ. ಕೊನೆಗೆ ಎಂಟನೆ ಮಗು ಗಂಡು ಸಂತಾನವಾದಾಗ ಅವನ ಸಂತೋಷಕ್ಕೆ ಪಾರವೇ ಇಲ್ಲ.

ಆದರೆ ಕೆಲವೇ ಕ್ಷಣಗಳಲ್ಲಿ ಅದು ಗಂಡೂ ಅಲ್ಲದ ಹೆಣ್ಣೂ ಅಲ್ಲದ ಮೂರನೇ ಲಿಂಗ (ಹಿಜರಾ) ಎಂದು ತಿಳಿದಾಗ ಆಘಾತಕೊಳಗಾಗುತ್ತಾನೆ. ಅಷ್ಟೇ ಅಲ್ಲ ಸಮಾಜವನ್ನು ಎದುರಿಸುವುದು ಕಷ್ಟ ಎಂದು ಆ ಹಸುಳೆಯನ್ನು ಕೊಲ್ಲವುದಕ್ಕೂ ಮುಂದಾಗುತ್ತಾನೆ. ಆಗ ಆತನ ಹೆಂಡತಿ ಸುರಯ್ಯಾ (ಝಾಯಿಬ್ ರೆಹಮನ್) ಅವನನ್ನು ತಡೆಯುತ್ತಾಳೆ. ಪರಿಪರಿಯಾಗಿ ಬೇಡಿಕೊಂಡ ನಂತರ ಕೊನೆಗೂ ಅವನನ್ನು ನಲ್ಕು ಗೋಡೆಗಳ ಮಧ್ಯೆ ಕೂಡಿಹಾಕುವ ಷರತ್ತಿನೊಂದಿಗೆ ಒಪ್ಪಿಕೊಳ್ಳುತ್ತಾನೆ. ಆ ಮಗು ಸೈಫಿ (ಮೆಹರ್ ಸಾಗರ್/ಉಮರ್ ಕಶ್ಮೀರಿ) ಹೊರ ಪ್ರಪಂಚದ ಜ್ಞಾನವೇ ಇಲ್ಲದೇ ಮತ್ತು ತನ್ನನ್ನು ಕಂಡರೆ ಅಸಹ್ಯ ಪಟ್ಟುಕೊಳ್ಳುವ ತಂದೆ ಎಂದರೆ ಅಂಜಿಕೆಯೊಂದಿಗೇ ಬೆಳೆಯುತ್ತದೆ. ಅದಕ್ಕೆ ತನ್ನ ಕೋಣೆಯೇ ಪ್ರಪಂಚ, ಅಲ್ಲಿ ಬಿಡಿಸಲಾಗಿರುವ ಚಿತ್ರಗಳೇ ಅವನ ಒಡನಾಡಿಗಳು. ಅಪ್ಪನನ್ನು ಬಿಟ್ಟು ಕುಂಟುಂಬದ ಎಲ್ಲರೂ ಅವನನ್ನು ಪ್ರೀತಿಯಿಂದ ಕಾಣುತ್ತಾರೆ.
ಈ ಮಧ್ಯೆ ಜೈನಾಬ್ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾಳೆ. ಆದರೆ ಪತಿಯ ಕಿರುಕುಳ ತಾಳಲಾರದೆ ಕೆಲವೇ ತಿಂಗಳಲ್ಲಿ ಮತ್ತೆ ತಂದೆಯ ಮನೆ ಸೇರಬೇಕಾಗುತ್ತದೆ. ಆಕೆಯ ಬೆಳೆದು ನಿಂತಿರುವ ತಮ್ಮನಲ್ಲಿ ಹೆಣ್ಣಿನ ಲಕ್ಷಣಗಳು ಕಾಣಿಸಿಕೊಳ್ಳುವುದು, ಅವನು ಹೆಣ್ಣಿನಂತೆ ಬಟ್ಟೆ ತೊಡುವುದನ್ನು ನೋಡುವ ಜೈನಾಬ್ ಅವನ ಮೇಲೆ ರೇಗುತ್ತಾಳೆ. ಆಗ ಆಕೆಯ ಸಮಸ್ಯೆಗೆ ಮುಸ್ತಫಾ (ಆತಿಫ್ ಅಸ್ಲಂ) ಪರಿಹಾರ ಸೂಚಿಸುತ್ತಾನೆ. ಮುಂಚಿನಿಂದಲೂ ಜೈನಾಬ್ಳ ತಂಗಿ ಆಯೆಶಾ(ಮಹಿರಾ ಖಾನ್)ಳನ್ನು ಪ್ರೀತಿಸುವ ಮುಸ್ತಫಾ, ಸೈಫಿಗೆ ಟ್ರಕ್ಗಳಿಗೆ ಪೈಂಟ್ ಮಾಡುವ ಕೆಲಸಕೊಡಿಸುತ್ತಾನೆ. ಆದರೆ ಸೈಫಿಯ ಲಿಂಗದ ಬಗ್ಗೆ ತಿಳಿದ ಅಲ್ಲಿನ ಅವನ ಸಹೋದ್ಯೋಗಿಗಳಿಂದ ಅವನಿಗೆ ಕಿರುಕುಳ ಶುರುವಾಗುತ್ತದೆ. ಒಂದು ದಿನ ಅವರೆಲ್ಲಾ ಸೇರಿ ಸೈಫಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಾರೆ. ಇದನ್ನು ಸೈಫಿ ತನ್ನ ತಾಯಿ ಮತ್ತು ಅಕ್ಕನಿಗೆ ಹೇಳುವುದನ್ನು ಕೇಳಿಸಿಕೊಳ್ಳುವ ಅವನ ತಂದೆ ಎಲ್ಲರೂ ಮಲಗಿದ್ದ ವೇಳೆ ಅವನನ್ನು ಉಸಿರುಗಟ್ಟಿಸಿ ಕೊಂದುಬಿಡುತ್ತಾನೆ. ಈ ಕೊಲೆಯಿಂದ ಹೊರಬರಲು ಪೋಲಿಸರು ಎರಡು ಲಕ್ಷ ಲಂಚ ಕೇಳಿದಾಗ ಆ ಹಣವನ್ನು ಹೊಂದಿಸಲು ಅವನು ತನ್ನ ಮೇಲೇ ನಂಬಿಕೆ ಇಟ್ಟು ಕೊಟ್ಟಿದ್ದ ಮಸೀದಿಯ ಹಣವನ್ನು ಬಳಸಿಕೊಳ್ಳುತ್ತಾನೆ. ಜೊತೆಗೆ ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ವೇಶ್ಯಾವಾಟಿಕೆ ನಡೆಸುವವನ ಮಕ್ಕಳಿಗೆ ಖುರಾನ್ ಹೇಳಿಕೊಡುವ ಕೆಲಸಕ್ಕೆ ಒಪ್ಪಿಕೊಳ್ಳುತ್ತಾನೆ. ಈ ಮಧ್ಯೆ ಮಸೀದಿಯ ಹಣ ವಾಪಸು ಮಾಡುವ ಸಂದರ್ಭ ಎದುರಾದಾಗ ಆ ತಲೆಹಿಡುಕನನ್ನೇ ಅವನು ಸಾಲ ಕೇಳುವ ಪ್ರಸಂಗ ಎದುರಾಗುತ್ತದೆ. ಆದರೆ ಹೆಣ್ಣುಗಳಿಂದಲೇ ತನ್ನ ಜೀವನವನ್ನು ನಡೆಸುವ ಆವನು ತನ್ನ ದಂಧೆ ಸರಾಗವಾಗಿ ಇನ್ನು ಮುಂದು ಸಾಗಬೇಕಾದರೆ ಈಗಿರುವ ವೇಶ್ಯೆಗೆ ಒಂದು ಹೆಣ್ಣು ಮಗುವಾಗಬೇಕು, ಇದಕ್ಕೆ ನೀನು ಒಪ್ಪುವುದಾದರೆ ಆ ಹಣವನ್ನು ನಿನಗೆ ಕೊಡುತ್ತೇನೆ ಎಂದು ಷರತ್ತು ವಿಧಿಸುತ್ತಾನೆ. ಹೀಗೆ ವೇಶ್ಯೆಯ ಸಂಗ ಮಾಡಿ ಅನೈತಿಕ ಸಂಬಂಧ ಬೆಳೆಸಿಕೊಳ್ಳುವ ಹಕೀಂ ಸಾಬ್ನಿಂದ ಕೊನೆಗೂ ಅವಳಿಗೆ ಒಂದು ಹಣ್ಣು ಶಿಶುವಾಗುತ್ತದೆ.
ಆದರೆ ಆ ಮಗುವನ್ನು ಅಲ್ಲಿ ಬಿಟ್ಟು ಹೋಗಲು ಮನಸೊಪ್ಪದೆ ಅದನ್ನು ತನ್ನೊಡನೆ ಕಳಸಿಕೊಡು ಎಂದು ಆ ವೇಶ್ಯೆಯಲ್ಲಿ ಕೇಳಿಕೊಳ್ಳುವುದನ್ನು ತಿಳಿದು ಆ ಮಾಲೀಕ ಅವನನ್ನು ಅಲ್ಲಿಂದ ಹೊಡೆದಟ್ಟುತ್ತಾನೆ. ಕೊನೆಗೆ ಒಂದು ದಿನ ಆಕೆಯ ತನ್ನ ಮಗುವನ್ನು ಹಕೀಂ ಸಾಬ್ನ ಮನೆಗೆ ತಂದುಬಿಡುತ್ತಾಳೆ. ಆಗ ತನ್ನ ಗಂಡ/ತಂದೆಯ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಳ್ಳುವ ಹೆಂಡತಿ ಮತ್ತು ಮಕ್ಕಳು ಅವನೊಡನೆ ವಾದ ಮಾಡಿಕೊಂಡು ಮಾರನೆ ದಿನ ಮನೆ ಬಿಟ್ಟು ಹೊರ ಹೋಗುವ ನಿಧರ್ಾರಕ್ಕೆ ಬರುತ್ತಾರೆ. ಆದರೆ ವೇಶ್ಯಾವಾಟಿಕೆ ನಡೆಸುವ ಮಾಲೀಕ ಇದ್ದಕ್ಕಿದಂತೆ ಅವರ ಮನೆ ಮೇಲೆ ದಾಳಿ ಮಾಡಿದಾಗ ಹಕೀಂ ಸಾಬ್ ಆ ಹಸುಳೆಯನ್ನೂ ಕೊಲ್ಲಲು ಹೋಗುತ್ತಾನೆ. ಇದನ್ನು ವಿರೋಧಿಸುವ ಜೈನಾಬ್ ಕೊನೆಗೆ ಬೇರೆ ದಾರಿ ಕಾಣದೆ ತನ್ನ ತಂದೆಯನ್ನು ಕೊಂದು ಆ ಮಗುವನ್ನು ತನ್ನ ತಂಗಿಯೊಡನೆ ಬೇರೆ ಕಡೆ ಕಳಿಸಿ ರಕ್ಷಿಸುತ್ತಾಳೆ. ಮನೆಯಲ್ಲಾ ಹುಡುಕಾಡಿದರೂ ಎಲ್ಲೂ ಮಗು ಕಾಣದಿದ್ದಾಗ ಖಾಲಿ ಕೈಲಿ ಆ ಮಾಲೀಕ ವಾಪಾಸಾಗುತ್ತಾನೆ. ಆದರೆ ತನ್ನ ತಂದೆಯನ್ನು ಕೊಂದ ಅಪರಾಧಕ್ಕೆ ಜೈನಾಬ್ಗೆ ಮರಣದಂಡನೆ ವಿಧಿಸಲಾಗುತ್ತದೆ.
ಇಲ್ಲಿ ನಿರ್ದೇಶಕ ಸೋಯೆಬ್ ಮನ್ಸೂರ್ ಹೆಣ್ಣು ಅನುಭವಿಸುವ ಸಮಸ್ಯೆಗಳ ಬಗ್ಗೆ ಹೇಳ ಹೊರಟಿರುವುದು ಗೊತ್ತಾದರೂ, ನಿರೂಪಣೆಯಲ್ಲಿ ಬಹಳಷ್ಟು ಗೊಂದಲಗಳಿವೆ. ಒಂದು ಸಮಸ್ಯೆಯನ್ನು ಹೇಳಲು ಹೋಗಿ ಇನ್ನೊಂದು ಸಮಸ್ಯೆಯನ್ನು ಅದರ ಮಧಯೆ ಇರುಕಿಸುತ್ತಾ ಹೋಗುತ್ತಾರೆ. ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿತನವಿದ್ದರೆ ಚಿತ್ರ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು ಎನಿಸುತ್ತದೆ.
ಚಿತ್ರದ ಕೊನೆಯಲ್ಲಿ ನಾಯಕಿ ಎಲ್ಲರಿಗೂ ಒಂದು ಪ್ರಶ್ನೆಯನ್ನು ಹಾಕುತ್ತಾಳೆ ಕೇವಲ ಸಾಯಿಸುವವರಿಗಷ್ಟೇ ಏಕೆ ಶಿಕ್ಷೆ ವಿಧಿಸಲಾಗುತ್ತದೆ. ಹುಟ್ಟಿಸುವವರಿಗೆ ಏಕಿಲ್ಲ ಅಂತ. ನಿಜಕ್ಕೂ ಮಕ್ಕಳನ್ನು ಹುಟ್ಟಿಸಿ ಅವರನ್ನು ಸಾಕಲಾಗದೇ ಅಥವಾ ಇನ್ನಾವುದೋ ಕಾರಣಕ್ಕೆ ಅವರಿಗೆ ನಿತ್ಯವೂ ನರಕದ ದರ್ಶನ ಮಾಡಿಸುವ ಕೆಲವು ಪೋಷಕರೂ ನಮ್ಮೊಡಿನಿದ್ದಾರೆ. ಅಂಥವರಿಗೂ ಶಿಕ್ಷೆ ಆಗಬೇಕು. ಒಂದು ಆಶಯವನ್ನಿಟ್ಟುಕೊಂಡು ಮಾಡಿದ ಈ ಸಿನಿಮಾ ನಿಜಕ್ಕೂ ಕೆಲವು ಲೋಪದೋಷಗಳನ್ನು ಹೊರತು ಪಡಿಸಿದರೆ ನಿಮ್ಮನ್ನು ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ.

No comments:

Post a Comment