Thursday, December 5, 2013

ಜೀವನ ಒಂಟಿ ರೈಲು ನಿಲ್ದಾಣ

ಅವಧಿಯಲ್ಲಿ ಪ್ರಕಟಗೊಂಡ ನನ್ನ ಎರಡನೇ ಲೇಖನ... ನಿಮಗಾಗಿ


ಯಾಕೋ ರೈಲು ನಿಲ್ದಾಣ ನೋಡಿದಾಗ…

ಜೀವನ ಒಂಟಿ ರೈಲು ನಿಲ್ದಾಣ

ನವೀನ್ ಕುಮಾರ್ ಕೆ

ಮೊನ್ನೆ ಶನಿವಾರ ನನಗೆ ಪರೀಕ್ಷೆ ಇತ್ತು, ಬಳ್ಳಾರಿಯಲ್ಲಿ. ಸರಿ ಪರೀಕ್ಷೆ ಅಂದ ಮೇಲೆ ತಪ್ಪಿಸೋಕಾಗುತ್ತಾ? ಶುಕ್ರವಾರದಂದು ರಾತ್ರಿಯೇ ಬೆಂಗಳೂರಿನಿಂದ ಹೊರಟೆ. ರಾತ್ರಿ ಪೂರಾ ಬಸ್ಸಿನಲ್ಲಿ ನಿದ್ದೆ ಇಲ್ಲ. ಬೆಳಗಾದರೆ 9 ಗಂಟೆಗೆ ಪರೀಕ್ಷೆ ಬೇರೆ. ಹಾಗೂ ಹೀಗೂ ಬಸ್ಸು ಬಳ್ಳಾರಿ ತಲುಪಿದಾಗ ಬೆಳಗಿನ ಜಾವ 4.50ರ ಸಮಯ. ಬಸ್ಸಿಳಿದೊಡನೆ ನನ್ನನ್ನು ಪಿಕ್ ಮಾಡಲು ಬರುತ್ತೇನೆಂದು ಒಪ್ಪಿಕೊಂಡಿದ್ದ ಗೆಳೆಯನಿಗೆ ಫೋನ್ ಮಾಡಿದರೆ, ಮಹಾಶಯನಿಂದ ಉತ್ತರವೇ ಇಲ್ಲ. ಗಡದ್ದಾಗಿ ನಿದ್ದೆ ಮಾಡುತ್ತಿದ್ದನೆನಿಸುತ್ತೆ. ಐದಾರು ಬಾರಿ ಕರೆ ಮಾಡಿ ಕೊನೆಗೆ ಬೇಸತ್ತು ನಡೆದುಕೊಂಡೇ ಹೊರಟೆ.
ಸುಮಾರು ಹನ್ನೊಂದು ವರ್ಷಗಳ ಕಾಲ ಬಳ್ಳಾರಿಯಲ್ಲೇ ಇದ್ದರೂ ಬೆಳಗಿನ ಸಮಯದಲ್ಲಿ ಅದೂ 5 ಗಂಟೆಗೇ, ನಾನು ಹೊರಗೆ ಬಂದಿದ್ದು ತೀರಾ ವಿರಳ. ಇನ್ನೂ ಮಬ್ಬುಗತ್ತಲು ಹಾಗೆಯೇ ಇತ್ತು. ಆ ಕತ್ತಲಲ್ಲಿಯೇ ನಾನು ನಡೆದು ಸಾಗಿದಂತೆಲ್ಲಾ ಕಪ್ಪು ಟಾರಿನ ರಸ್ತೆಯನ್ನು ಹಿಮ್ಮೆಟ್ಟಿ ಸಾಗುತ್ತಿರುವ ಅನುಭವ ನನಗೆ ನಡೆದು ಹೋಗಲು ಸ್ಪೂರ್ತಿಯಾಗಿತ್ತು. ಹಾಗೇ ಮುಂದೆ ಬಳ್ಳಾರಿಯ ಗುಡ್ಡದ ಪಕ್ಕದಿಂದಲೇ ಹಾದು ಹೋಗುವ ರಸ್ತೆಯಲ್ಲಿ ಗಡ್ಡದ ಕಲ್ಲು ಬಂಡೆಗಳೂ, ಕರಿಯ ಹೊದಿಕೆ ಹೊದ್ದ ಆಕಾಶವೂ ಮಿಲನಗೊಂಡ ಭ್ರಾಂತಿ. ಈ ಮಿಲನವನ್ನು ತಡೆಯಲೇನೋ ಎಂಬಂತೆ, ಸೂರ್ಯ ಎಲ್ಲಿಂದ ಹೊರಬರಬೇಕೆಂದು ತವಕಿಸುತ್ತಾ ಇಣುಕಿ ನೋಡುತ್ತಿದ್ದಾನೇನೋ ಎಂದು ಭಾಸವಾಗುತ್ತಿತ್ತು. ರಾತ್ರಿಯೆಂದರೆ ಕರಾಳವಾಗೇ ಊಹಿಸಿಕೊಳ್ಳುತ್ತಿದ್ದ ನನಗೆ ಕತ್ತಲು ಕೂಡ ಇಷ್ಟು ರಮ್ಯವಾಗಿರುವುದು ಎಂದು ತಿಳಿದದ್ದೇ ಅಂದು. ಹಾಗೆಯೇ ಪ್ರಕೃತಿಯ ಸವಿ ಮತ್ತು ಮುಂಜಾವಿನ ತಣ್ಣನೆಯ ಗಾಳಿಯನ್ನು ಸವಿಯುತ್ತಾ ಭ್ರಮಾ ಲೋಕದಲ್ಲಿರುವಂತೆ ಮುಂದೆ ಸಾಗಿದವನಿಗೆ ಎಚ್ಚರವಾದದ್ದು ಸ್ನೇಹಿತನ ರೂಮು ಸಮೀಪಿಸಿದಾಗ.
ಹೋಗಿ ಬಾಗಿಲು ತಟ್ಟುತ್ತಿದ್ದಂತೆ ಗೆಳೆಯ ಬಾಗಿಲು ತೆರೆದವನೇ ಹೇಗಿದ್ದೀಯ ಬಾ ಒಳಗೆ… ಎಂದು ಸ್ವಲ್ಪ ರೆಸ್ಟ್ ತಗೋ ಅಂತ ಚಾಪೆ ತೋರಿಸಿದ. ಅಲ್ಲಿಯವರೆಗೂ ಎಲ್ಲಿತ್ತೋ ಗೊತ್ತಿಲ್ಲ, ನಲವತ್ತು ನಿಮಿಷದ ನಡಿಗೆಯ ಆಯಾಸ ಧುತ್ತೆಂದು ಹೊರಬಿತ್ತು, ಕಣ್ಣುಗಳು ಎಳೆಯ ತೊಡಗಿದವು. ಸರಿ ಸ್ವಲ್ಪ ಹೊತ್ತು ಮಲಗಿ ನಂತರ ಎದ್ದು ಫ್ರೆಷಪ್ ಆಗಿ ಪರೀಕ್ಷೆಗೂ ಒಂದಷ್ಟು ತಯಾರಿ ಮಾಡಿಕೊಂಡರಾಯ್ತು ಎಂದುಕೊಂಡು ಮಲಗಿದವನಿಗೆ ಎಚ್ಚರವಾಗಿದ್ದೆ ಎಂಟರ ಹೊತ್ತಿಗೆ. ಹರಿಬರಿಯಲ್ಲಿ ಎದ್ದವನೇ ಸ್ನಾನಾದಿಗಳನ್ನು ಮುಗಿಸಿ ನೇರ ಕಾಲೇಜ್ ಹತ್ತಿರವಿರುವ ಕ್ಯಾಂಟೀನ್ಗೆ ಹೋದವನೇ ಒಂದಷ್ಟು ಮಂಡಕ್ಕಿ ವಗ್ಗರಣೆ, ಮಿರ್ಚಿಯನ್ನು ಹೊಟ್ಟೆಯ ಚೀಲಕ್ಕೆ ತುಂಬಿಸಿಕೊಂಡು ಎಕ್ಸಾಮ್ ಹಾಲ್ಗೆ ಹೋದವನಿಗೆ ಪ್ರಶ್ನೆ ಪತ್ರಿಕೆ ನೋಡಿ ಅರ್ಧ ಜಂಘಾಬಲವೇ ಉಡುಗಿಹೋದಂತಾಗಿತ್ತು. ಮೊದಲೇ ಏನೂ ಓದಿರಲಿಲ್ಲ. ಇನ್ನು ಅದರಲ್ಲಿರುವ ಕೆಲವು ಪದಗಳು ಇದೇ ಮೊದಲಬಾರಿಗೆ ಓದಿದಂತೆ ಅನಿಸುತಿತ್ತು. ಆದರೂ ಹೇಗೋ ಒಂದಷ್ಟು ನೆನಪಿರುವುದನ್ನೆಲ್ಲಾ ಕಲೇಬಿದ್ದು ಮನಃ ಪಟಲದಲ್ಲಿ ಕೂಡಿಹಾಕಿಕೊಂಡು, ಅದನ್ನೇ ಉತ್ತರ ಪತ್ರಿಕೆಯಲ್ಲಿ ಬರೆದು, ಸಮಯ ಮುಗಿಯುತ್ತಿದ್ದಂತೆ ಬದುಕಿದೆಯಾ ಬಡಜೀವವೇ ಎಂದು ಹೊರಬಿದ್ದೆ.
ಮತ್ತೆ ಹೊಸಪೇಟೆಗೆ ಹೋಗಬೇಕಿದ್ದುದರಿಂದ ಸ್ನೇಹಿತನ ಮನೆಗೆ ಹೋಗಿ ಮಧ್ಯಾಹ್ನದ ಊಟ ಮುಗಿಸಿಕೊಂಡು ರೈಲ್ವೇ ಸ್ಟೇಷನ್ ಕಡೆ ಹೊರಟೆ. ನಿದ್ದೆಯ ಮಂಪರು ಇನ್ನೂ ಬಿಟ್ಟಿರಲಿಲ್ಲ. ತಲೆಯ ಮೇಲೆ ಮಟ ಮಟ ಮಧ್ಯಾಹ್ನದ ಬೆಂಕಿ ಚಂಡು ನೆತ್ತಿಯನ್ನು ಸುಡುತ್ತಿತ್ತು. ಸ್ಟೇಷನ್ ತಲುಪಿ ಟಿಕೇಟ್ ತೆಗೆಸಿಕೊಳ್ಳಲು ಹೋದರೆ ಅಲ್ಲೂ ರೈಲು ಬೋಗಿಗಳಷ್ಟು ಉದ್ದದ ಕ್ಯೂ. ಹದಿನೈದು ನಿಮಿಷಗಳ ಬೇಸರದ ಕಾಯುವಿಕೆಯ ನಂತರ ಟಿಕೇಟ್ ಪಡೆದು ಒಳ ಹೊಕ್ಕವನಿಗೆ, ಹಳೆಯ ಸಹ-ಕೆಲಸಗಾರನೊಬ್ಬ ಭೇಟಿಯಾದ. ಅವನು ತನ್ನ ಹೆಂಡತಿಯೊಂದಿಗೆ ಹುಬ್ಬಳ್ಳಿಗೆ ಹೊರಟಿದ್ದನಂತೆ. ಇತ್ತೀಚಿಗಷ್ಟೇ ಮದುವೆಯಾಗಿದ್ದ ಅವನ ಮುಖದಲ್ಲಿ ಇನ್ನೂ ಮದುಮಗನ ಕಳೆ ಎದ್ದು ಕಾಣುತಿತ್ತು. ಅವನ ಕುಶಲೋಪರಿ ವಿಚಾರಿಸಿ ಅವನ ನವಜೀವನಕ್ಕೆ ಶುಭ ಹಾರೈಸಿ ಮುಂದಕ್ಕೆ ಹೋದೆ. ಶನಿವಾರವಾದ ಕಾರಣ ನಿಲ್ದಾಣದ ತುಂಬಾ ಜನಜಂಗುಳಿ ಗಿಜಿಗುಡುತ್ತಿತ್ತು. ಚಿಕ್ಕ ಮಕ್ಕಳ ಅಳು, ಸತ್ತಲೂ ಇರುವವರ ಪರಿವೆಯೇ ಇಲ್ಲದಂತೆ ಜೋರಾಗಿ ಅವರಿವರ ಬಗ್ಗೆ ಮಾತನಾಡಿಕೊಳ್ಳುತ್ತಿರುವವರು, ಕೀಟಲೆ ಮಾಡುತ್ತಿರುವ ಮಕ್ಕಳನ್ನು ಗಡರಿಸುವವರು ಹೀಗೆ ನಾನಾ ರೀತಿಯ ಜನ ಅವರವರ ಲೋಕದಲ್ಲಿ ಮುಳುಗಿದ್ದರು.
ಆಗಲೇ ರೈಲು ಅರ್ಧಗಂಟೆ ತಡವಾಗಿ ಚಲಿಸುತ್ತಿದೆ ಎಂಬ ಉದ್ಘೋಷಕರ ಧ್ವನಿ ಕೇಳಿ ಎಲ್ಲರೂ ಈ ಲೋಕಕ್ಕೆ ಮರಳಿದವರಂತೆ, ಈ ರೈಲುಗಳ ಹಣೇಬರಹವೇ ಇಷ್ಟು. ಯಾವತ್ತಾದರೂ ಸಮಯಕ್ಕೆ ಸರಿಯಾಗಿ ಬಂದರೆ ಅದೇ ದೊಡ್ಡ ಸಾಹಸ ಎಂದು ಬೈದುಕೊಳ್ಳಲು ಶುರುವಿಟ್ಟರು. ಸರಿ ಇನ್ನೂ ಅರ್ಧಗಂಟೆ ಹೇಗೆ ಕಾಲ ಕಳೆಯುವುದು ಎಂದು ನನ್ನ ಬ್ಯಾಗ್ ತಡಕುತ್ತಿದ್ದವನಿಗೆ ಯಾವುದೋ ಮಾಸ ಪತ್ರಿಕೆಯೊಂದು ಸಿಕ್ಕಿತು. ಅದನ್ನೇ ಓದುತ್ತಾ ಕುಳಿತೆ. ಓದುತ್ತಿದ್ದವನಿಗೆ ಅದ್ಯಾವಾಗ ಅರ್ಧಗಂಟೆಯಾಯ್ತೋ ಗೊತ್ತಾಗಲಿಲ್ಲ. ಮತ್ತೆ ಇನ್ನು ಕೆಲವೇ ಕ್ಷಣಗಳಲ್ಲಿ ರೈಲು ನಿಲ್ದಾಣಕ್ಕೆ ಬರಲಿದೆ ಎಂಬ ಅನೌನ್ಸ್ಮೆಂಟ್ ಬಂದಾಗಲೇ ಎಚ್ಚರವಾಗಿದ್ದು. ಆಗ ಸುತ್ತಲೂ ನೋಡಿದೆ. ಎಲ್ಲರೂ ರೈಲಿನ ಬರುವಿಗಾಗಿ ಕಾಯುತ್ತಾ ಶತಪಥ ಹಾಕುತ್ತಿದ್ದರು. ಇನ್ನು ಕೆಲವರು ಸೀಟನ್ನು ಹಿಡಿಯಲು ಪ್ಲಾಟ್ಫರ್ಾಮ್ ಬಿಟ್ಟು ಆಚೆ ಬದಿಯಲ್ಲಿ ಹೋಗತೊಡಗಿದರು. ಆಗ ಗಮನ ಸೆಳೆದದ್ದು ಒಂದು ಪುಟ್ಟ ಹುಡುಗಿಯ ಧ್ವನಿ. ಅವಳು ಮಾಮಾ ಎಂದು ಕರೆಯುತ್ತಿದ್ದರೆ, ಯಾರಪ್ಪಾ ಅದು ಎಂದು ನೋಡಿದೆ. ಚಿಕ್ಕ ಮಗುವೊಂದು ಆಚೆ ಬದಿ ಹೋಗುತ್ತಿದ್ದ ತನ್ನ ಸೋದರಮಾವನನ್ನು ಕೂಗುತ್ತಿತ್ತು.
ಸುಮ್ಮನೆ ಆಟವಾಡಿಸಲು ಕೂಗುತ್ತಿದೆಯೇನೋ ಅನಿಸಿದರೂ, ಯಾಕೋ ಕುತೂಹಲ ಮೂಡಿ ಆ ಮಗುವನ್ನೇ ದಿಟ್ಟಿಸುತ್ತಿದ್ದೆ. ಮೂರ್ನಾಲ್ಕು ಸಲ ಕೂಗಿದ ನಂತರ ಆ ಹುಡುಗಿಯ ಮಾವ ಅವಳೆಡೆಗೆ ತಿರುಗಿದಾಗ, ಹಷಾರು ಮಾಮ, ತುಂಬಾ ಹತ್ತಿರ ಹೋಗಬೇಡ ಎಂದು ಎಚ್ಚರಿಕೆಯನ್ನು ನೀಡಿತು. ಆ ಎಳೆ ಹುಡುಗಿಗೆ ತನ್ನ ಮನೆಯವರ ಮೇಲೆ ಇರುವ ಪ್ರೇಮ, ಕಾಳಜಿ ನಿಜಕ್ಕೂ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು. ಅಷ್ಟರಲ್ಲೇ ನಾವು ಹೊರಡಬೇಕಿರುವ ರೈಲು ನಿಲ್ದಾಣಕ್ಕೆ ಬಂದು ನಿಂತಿದ್ದರಿಂದ, ನಾನೂ ಸೀಟು ಹಿಡಿದುಕೊಳ್ಳಲು ತರಾತುರಿಯಲಿ ಒಳ ಹೊಕ್ಕು, ಅಂತೂ ಒಂದು ಕಿಟಕಿ ಬದಿಯ ಕುರ್ಚಿಯಲ್ಲಿ ಕುಳಿತುಕೊಂಡೆ. ಹಾಗೇ ಕಿಟಕಿಗೆ ತಲೆಯಾನಿಸಿ ಹೊರ ನೋಡುತ್ತಿದ್ದವನಿಗೆ ಅಷ್ಟೊತ್ತು ಇದ್ದ ಜನರ ಕಲರವ, ಆ ಗಡಿಬಿಡಿ ಕಡಿಮೆಯಾಗುತ್ತಿರುವುದು ಕಾಣಿಸಿತು. ಹಾಗೇ ರೈಲು ಹೊರಡುವಷ್ಟರಲ್ಲಿ ರೈಲು ನಿಲ್ದಾಣ ಪೂರ್ತಿ ಖಾಲಿಯಾಗಿತ್ತು. ಬರಿ ಸಾಮಾನುಗಳನ್ನು ಸಾಗಿಸುವ ರೈಲ್ವೇ ಸಿಬ್ಬಂದಿಯನ್ನು ಬಿಟ್ಟು ಬೇರೆ ಯಾರೂ ಅಲ್ಲಿ ಕಾಣಲಿಲ್ಲ. ಆಗಲೇ ಅನಿಸಿದ್ದು, ನಮ್ಮ ಜೀವನವೂ ಇಷ್ಟೇ, ರೈಲು ನಿಲ್ದಾಣದಂತೆ. ಅನೇಕರ ಆಗಮವಾದರೂ, ಅವರವರ ರೈಲುಗಳು ಬಂದಾಗ, ಕೆಲವರು ಹೇಳಿ ಹೊರಟರೆ ಇನ್ನು ಕೆಲವರು ಹೇಳದೆಯೇ ಹೊರಟುಹೋಗುತ್ತಾರೆ. ಕೊನಗೆ ನಮ್ಮ ಜೀವನ ಒಂಟಿ ರೈಲು ನಿಲ್ದಾಣದಂತೆ ಖಾಲಿ ಖಾಲಿ.
ಬರುವಾಗಲೂ ಒಬ್ಬಂಟಿ
ಹೋಗುವಾಗಲೂ ಒಬ್ಬಂಟಿ
ನಡುವೆ ಬಾಂಧವ್ಯಗಳ, ಭಾವನೆಗಳ ಸರಮಾಲೆಹೊತ್ತು
ತಿರುಗುವ ಆತುರದಲ್ಲಿ
ಪ್ರಕೃತಿ ಸತ್ಯವನ್ನೇ ಮರೆತು ವೇಗದಿಂದ ಮುನ್ನುಗ್ಗುತ್ತೇವೆ,
ಇದ್ದಕ್ಕಿದ್ದಂತೆ ಒಂಟಿ ಎಂಬ ಸತ್ಯ
ಎದುರು ಗೋಚರಿಸಿದಾಗ ಮತ್ತೆ ಕುಗ್ಗಿ ಬಾಗುತ್ತೇವೆ.
ಹೀಗೆ ಯೋಚಿಸುತ್ತಾ ಕಿಟಕಿಗೆ ಆನಿಕೊಂಡು ಕುಳಿತವನಿಗೆ ನಿದ್ದೆ ಯಾವಾಗ ಹತ್ತಿತು ಎಂಬುದು ಗೊತ್ತಾಗಲಿಲ್ಲ. ಆದರೆ ಎಚ್ಚರಗೊಂಡ ಮೇಲೂ ಅದೇ ಸಾಲುಗಳು ನನ್ನನ್ನು ಇನ್ನೂ ಕಾಡುತ್ತಿವೆ.