Saturday, November 29, 2014

ಶಿಕ್ಷಣವೂ ವ್ಯಾಪಾರವಾದಾಗ...

ಶಿಕ್ಷಣವೂ ವ್ಯಾಪಾರವಾದಾಗ...

ಅದೊಂದು ಕಾಲವಿತ್ತು. ಶಿಕ್ಷಣವಷ್ಟೇ ವ್ಯಕ್ತಿಯನ್ನ ರೂಪಿಸುತ್ತದೆ. ಮನುಷ್ಯನನ್ನಾಗಿ ಮಾಡ್ತದೆ ಅಂತ ಎಲ್ಲರೂ ನಂಬಿದ್ರು. ಬಹುತೇಕ ಹಾಗೇ ಆಗ್ತಾ ಇತ್ತು ಕೂಡ ಅನ್ಸುತ್ತೆ. ಆದ್ರೀಗ ನಾವು ಈ ಮಾತನ್ನ ಹೇಳೋ ಹಂಗೇ ಇಲ್ಲ. ಇಂದು ಜಗತ್ತು ಮುಷ್ಠಿ ಮಾಡಿದ್ರೆ, ಕೈಯ್ಯೊಳಗೆ ಹಿಡಿಯುವಷ್ಟು ಚಿಕ್ಕದಾಗಿದೆ. ಅದೇ ಮುಷ್ಠಿ ಬಿಚ್ಚಿದ್ರೆ, ಅಂಗೈಗೆ ಮೀರಿದ್ದು, ಯೋಚನೆಗೂ ಮೀರಿದ್ದು...

ಜಾಗತೀಕರಣದಿಂದ ಇಡೀ ಜಗತ್ತು ಒಂದು ಚಿಕ್ಕ ಮನೆ ಅನಿಸುಂತೇನೋ ಆಗಿದೆ. ಆದ್ರೆ ಮನುಷ್ಯನನ್ನ ಮನುಷ್ಯನನ್ನಾಗಿಸ್ತದೆ ಅಂದ್ಕಂಡಿದ್ದ ಶಿಕ್ಷಣ ಮಾತ್ರ ನುಂಗಲಾರದ ಬಿಸಿ ತುಪ್ಪ. ಮೊದಲೆಲ್ಲಾ ಮನುಷ್ಯನಿಗೆ ಬದುಕೋದನ್ನ ಕಲಿಸೋಕೆ ಅಂತ ಶಿಕ್ಷಣ ಕೊಡ್ತಿಸ್ತಾ ಇದ್ರು. ಆದ್ರೀಗ ಶಿಕ್ಷಣ ಕೂಡ ವ್ಯಾಪಾರ ಆಗಿದೆ. ಅದಕ್ಕಿಂತಲೂ ಹೆಚ್ಚಾಗಿ ಶಿಕ್ಷಣ ಅನ್ನೋದು ಈಗ ಬರೀ ಒಣ ಪ್ರತಿಷ್ಠೆಯ ವಿಷ್ಯ. ಲಕ್ಷಂತಾರ ರೂಪಾಯಿ ಸುರಿದು ಮಕ್ಕಳನ್ನ ಶಾಲೆಗೆ ಸೇರಿಸೋ ಅಪ್ಪ, ಅಮ್ಮಂದ್ರಿಗೆ ತಮ್ಮ ಮಗ/ಮಗಳು ಶಾಲೆಗೇ ಫಸ್ಟ್ ಬರ್ಬೇಕು, ಊರಿಗೆ, ಜಿಲ್ಲೆಗೆ, ರಾಜ್ಯಕ್ಕೇ ಫಸ್ಟ್ ಬರ್ಬೇಕು ಅನ್ನೋ ಆಸೆ. ಇದಕ್ಕಾಗಿ ಮಕ್ಕಳನ್ನ ಒಂದರ್ಥದಲ್ಲಿ ಪೀಡಿಸ್ತಾನೆ ಇರ್ತಾರೆ. ಅಪ್ಪಿ ತಪ್ಪಿ ತಮ್ಮ ಮಗ/ಮಗಳು 100ಕ್ಕೆ 99 ಅಂಕ ತಂದ್ರೋ ಕಥೆ ಮುಗಿದೇ ಹೋಯ್ತು. ಆಕಾಶಾನೇ ಕಳಚಿ ಬಿದ್ದೋರ್ ಥರ ಆಡ್ತಾರೆ. ಪಾಪ ಆ ಮಗುವಿನ ಪರಿಸ್ಥಿತಿ ಬಗ್ಗೆ ಕಿಂಚಿತ್ ಕೂಡ ಆಲೋಚನೆನೇ ಇಲ್ಲ. ತಮ್ಮ ಸ್ನೇಹಿತರಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಕೇಳ್ದಾಗ ಹೇಗಪ್ಪ ಹೇಳೋದು ಅನ್ನೋದಷ್ಟೇ ಇವ್ರ ಟೆನ್ಷನ್. ನೈಟ್ ಕ್ಲಬ್​ಗಳಲ್ಲಿ, ಕಿಟ್ಟಿ ಪಾರ್ಟಿಗಳಲ್ಲಿ ತಮ್ಮ ಮಕ್ಕಳ 100 ಅಂಕದ ಬಗ್ಗೆ ಮಾತೋಡೋದೇ ಇವ್ರಿಗೆ ಪ್ರತಿಷ್ಠೆ. ಅದಕ್ಕಿಂತ್ಲೂ ಹೆಚ್ಚಾಗಿ ಮುಂದೆ ತಮ್ಮ ಮಕ್ಕಳು ಅದೇ ಆಗ್ಬೇಕು, ಇದೇ ಆಗ್ಬೇಕು ಅನ್ನೋ ಇವ್ರ ಒತ್ತಡ, ಆ ಎಳೇ ಕಂದಮ್ಮಗಳನ್ನ ಬೆಳೆಯೋಕೆ ಬಿಡದಂತೆ ಚಿವುಟಿ ಹಾಕ್ತದೆ. ಜೀವನವನ್ನ ಕಲಿಸಬೇಕಾಶ ಶಾಲೆ, ಪಾಠಗಳು ಜೀವನ ಅಂದ್ರೇನೇ ಜಿಗುಪ್ಸೆ ಹುಟ್ಟೋ ಹಾಗೇ ಮಾಡ್ತವೆ.

ಇನ್ನು ಶಿಕ್ಷಣ ಸಂಸ್ಥೆಗಳದ್ದು ಇನ್ನೊಂದು ಗೋಳು. ಕೋಟಿ ಕೋಟಿ ಹಣ ಹೂಡಿ ಶಾಲೆಗಳನ್ನ ತೆಗೀತಿರೋ ಇಂದಿನ ಶಿಕ್ಷಣ ಸಂಸ್ಥೆಗಳು, ಅದನ್ನ ಮತ್ತೆ ವಾಪಸ್ ಪಡೆಯೋದು ಹೇಗೆ. ಹೂಡಿಕೆಯ ದುಪ್ಪಟ್ಟು, ಮೂರು ಪಟ್ಟು, ಹತ್ತು ಪಟ್ಟು ಲಾಭಗಳಿಸೋದು ಹೇಗೆ ಅನ್ನೋ ಲೆಕ್ಕಾಚಾರದಲ್ಲೇ ಇರ್ತವೆ. ಇದಕ್ಕೆ ಪೂರಕವಾಗಿ ಅಬ್ಬಾ ಅದೆಷ್ಟು ಅಡ್ವರ್ಟೈಸ್​ಮೆಂಟ್​ಗಳು. ನಮ್ಮ ಶಾಲೆ ರಾಜ್ಯಕ್ಕೇ ನಂ.1. ನಮ್ದು ದೇಶಕ್ಕೇ ನಂ.1 ಅಂತ. ಸರಿಯಾಗಿ ಪತ್ತೆ ಹಚ್ಚೋಕ್ ಹೋದ್ರೆ, ಪಕ್ಕದ ಬೀದೀಲಿ ಇರೋರ್ಗೇ ಈ ಶಾಲೆಗಳ ಬಗ್ಗೆ ಗೊತ್ತಿರಲ್ಲ. ಆದ್ರೂ ನಾವೇ ನಂ.1 ಅಂತ ಹೇಳ್ಕೊಂಡು ಅಡ್ಡಾಡ್ತಾನೆ ಇರ್ತಾರೆ ಈ ಶಾಲೆಗಳ ಆಡಳಿತದವ್ರು. ಇನ್ನು ಈ ನಂ.1 ಪಟ್ಟದ ಬಗ್ಗೆ ಜನ್ರಲ್ಲಿ ನಂಬಿಕೆ ಹುಟ್ಟಿಸೋಕೆ, ಅವ್ರನ್ನ ತಮ್ಮತ್ತ ಸೆಳೆಯೋಕೆ ಇವ್ರಿಗೂ ಆದಷ್ಟು ಮಕ್ಕಳು ಹೆಚ್ಚಿನ ಅಂಕಗಳನ್ನ ತಗಂಡು ಪಾಸ್ ಆಗ್ಲೇ ಬೆಕು. ಇಲ್ದಿದ್ರೆ, ಮುಂದಿನ ವರ್ಷ ಆ ಶಾಲೆ ಖಾಲಿ ಖಾಲಿ. ಅದಕ್ಕೇ ಮಕ್ಕಳಿಗೆ ಹೀಗೇ ಓದ್ಬೇಕು. ಇಷ್ಟೇ ಅಂಕ ತರ್ಬೇಕು ಅನ್ನೋ ಅಪ್ಪಣೆ, ಕಟ್ಟಳೆಗಳು. ಅದಕ್ಕಿಂತ್ಲೂ ಆಘಾತಕಾರಿ ವಿಷ್ಯ ಅಂದ್ರೆ, ಇಷ್ಟು ಮಾರ್ಕ್ಸ್ ಬಂದು ನೀನು ಪಾಸಾದ್ರೆ ಮಾತ್ರ ಕೆಲಸಕ್ಕೆ ಬರೋ ಹುಡುಗ/ಹುಡುಗಿ. ಇಲ್ದಿದ್ರೆ ನೀನು ನಿರುಪಯುಕ್ತ ಅನ್ನೋ ಭಾವನೆನ ಮಕ್ಕಳ ಮನಸಲ್ಲಿ ಮೂಡಿಸ್ತಾರೆ.

ಇದಕ್ಕೆಲ್ಲಾ ಕಾರಣ ಇವತ್ತು ನಾವು ಏನೇ ಯೋಚಿಸಿದ್ರೂ ಅದನ್ನ ವ್ಯಾಪಾರಿ ದೃಷ್ಠಿಯಿಂದ ಆಲೋಚಿಸೋದು. ಅಪ್ಪ ಅಮ್ಮಂದಿರು ತಮ್ಮ ಹೂಡಿಕೆಗೆ ತಕ್ಕಂತೆ ಮಕ್ಕಳು ಇದೇ ಆಗ್ಬೇಕು. ಆಗಷ್ಟೇ ತಮ್ಮ ಹೂಡಿಕೆಯಿಂದ ಲಾಭ ಗಳಿಸಲು ಸಾಧ್ಯ ಅಂತ ನಂಬಿದ್ದಾರೆ. ಇನ್ನು ಶಿಕ್ಷಣ ಸಂಸ್ಥೆಗಳಂತೂ ಬಿಡಿ. ತಮ್ಮ ಬ್ರಾಂಡ್ ಅನ್ನ ಅಡ್ವರ್ಟೈಸ್ ಮಾಡಲು ಇವ್ರಿಗೆ ಹೊಳೆಯೋಷ್ಟು ಐಡಿಯಾಗಳು ಯಾರಿಗೂ ಹೊಳೆಯಲ್ಲ. ಇದೆಲ್ಲದರ ಒಟ್ಟಾರೆ ಪರಿಣಾಮವಾಗಿ ಜೀವನ ಕಂಡುಕೊಳ್ಳಬೇಕಿದ್ದ ಮಕ್ಕಳು ಒಂದು ಅರ್ಧಕ್ಕೆ ಗುಡ್ ಬೈ ಹೇಳಿದ್ರೆ, ಇನ್ನು ಕೆಲವರು ಯಂತ್ರಗಷ್ಟೇ ಆಗಿ ಪರಿವರ್ತಿತರಾಗ್ತಾ ಇದ್ದಾರೆ. ಈಗಲೂ ಎಚ್ಚೆತ್ತುಕೊಳ್ಳೋಕೆ ಅವಕಶಾವಿದೆ. ಶಿಕ್ಷಣವನ್ನ ವ್ಯಾಪಾರಿ ದೃಷ್ಠಿಯಿಂದ ನೋಡದೆ, ಯಂತ್ರಗಳನ್ನ ತಯಾರಿಸೋ ಕಾರ್ಖಾನೆಯನ್ನಾಗಿಸದೇ ನಿಜವಾಗಲೂ ಜೀವನವನ್ನ ಕಲಿಸೋಕೆ ಬಳಸಿಕೊಂದ್ರೆ, ಅದಕ್ಕೆ ತಕ್ಕಂತೆ ಪಠ್ಯ ಕ್ರಮ ಸಿದ್ಧಪಡಿಸದ್ರೆ, ಎಲ್ಲವೂ ಸರಿಹೋಗೋದು ಅಷ್ಟೇನೂ ಕಷ್ಟವಾಗಲಿಕ್ಕಿಲ್ಲ. ಶಾಲೆಯೆಂಬ ಕಾರ್ಖಾನೆ ಹೂದೋಟವಾಗಿ, ಅಲ್ಲಿರೋ ಮೊಗ್ಗುಗಳು ಅರಳುವ ಮುನ್ನವೇ ಬಾಡಿ ಹೋಗೋದನ್ನ ತಪ್ಪಿಸಬಹುದು.

ನವೀ...

Friday, November 28, 2014

ಕೆಲವ್ರಿಗೆ ವುಲನ್ ಟೋಪಿ... ಹಲವ್ರಿಗೆ ಮಕಮಲ್​ದು...

ಕೈಲಾಗದೋನು ಮೈ ಪರಚಿಕೊಂಡ ಅಂತ ಒಂದ್ ಗಾದೆ ಇದೆ. ಬಹಶಃ ಈ ವಿಷ್ಯಕ್ಕೂ ಈ ಗಾದೆಗೂ ಏನೂ ಸಂಬಂಧವಿಲ್ದೇ ಇರಬೋದು. ಆದ್ರೆ ಸಮೀಪದ ಸಂಬಂಧ ಅಂತೂ ಇದೆ. ಇಷ್ಟು ದಿನ ಕೇಂದ್ರದಲ್ಲಿ ಅಥವಾ ರಾಜ್ಯಗಳಲ್ಲೇ ಆಗ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೋಕೆ ‘ಜನಪ್ರತಿನಿಧಿ'ಗಳು ಅಂತ ಅನಿಸಿಕೊಂಡವರು / ಅನಿಸಿಕೊಳ್ಳುವವರು ಜನರಿಗೆ ವುಲನ್ ಟೋಪಿ ಹಾಕ್ತಾ ಇದ್ರು. ಆದ್ರೆ ಅದ್ಯಾವ ಘಳಿಗೇಲಿ ‘ನಮ್ಮ' ಮೋದಿ ಸಾಹೇಬ್ರು ಅಖಾಡಕ್ಕೆ ಬಂದ್ರೋ, ನೋಡಿ ಖದರೇಽ ಬೇರಾಯ್ತು. ಮಕಮಲ್ ಟೋಪಿ ಹಾಕೋಕ್ ಶುರು ಮಾಡಿದ್ರು. ಜನ್ರಿಗೂ ವುಲನ್ ಟೋಪಿ ಹಾಕ್ಕಂಡೂ ಹಾಕ್ಕಂಡೂ ಬೇಜಾರಾಗಿತ್ತು. ಅವ್ರು ವುಲನ್​ನಿಂದ ಮಕಮಲ್​ಗೆ ಶಿಫ್ಟ್. ಇಲ್ಲಿ ನನಗೆ ಮೋದಿ ಅಂದ್ರೆ ದ್ವೇಷ ಏನೂ ಇಲ್ಲ. ಇಲ್ಲಿವರ್ಗೂ ಎಲ್ಲಾ ರಾಜಕಾರಣಿಗಳು ಮಾಡ್ತಾ ಇದ್ದಿದ್ನೇ ಇವ್ರೂ ಮಾಡಿದಾರೆ ಅಷ್ಟೇ. ಆದ್ರೆ ಸ್ವಲ್ಪ ಕಲರ್​ಫುಲ್​ ಆಗಿ ಮಾಡಿದಾರೆ. ಇದ್ರಲ್ಲಿ ತಮ್ಮ ಚಾಣಾಕ್ಷತೆ ಮೆರೆದಿದಾರೆ.

ಇಲ್ಲಿ ನಿಜವಾಗ್ಲೂ ಮಂಕೆಗಳಾಗಿದ್ದು ಮಾತ್ರ ಜನ್ರೇ. ಪದೇ ಪದೇ ರಾಜಕಾರಣಿಗಳ ಪೊಳ್ಳು ಭರವೆಸೆಗಳನ್ನ ಕೇಳ್ತಾ ಇರ್ತೀವಿ. ಅವು ಈಡೇರಲ್ಲ ಅನ್ನೋದು ನಮ್ಗೆ ಗೊತ್ತೂ ಇರತ್ತೆ. ಆದ್ರೂ ನಾವು ಈ ಭರವಸೆಗಳ ಬುನಾದಿ ಮೇಲೆಯೇ ಬದುಕೋಕೆ ಆಸೆ ಪಡ್ತೀವಿ. ಹಿಂದಿನವ್ರು ಕೊಟ್ಟ ಭರವಸೆಗಳೆಲ್ಲಾ ಈಡೇರಿದೋ ಅಷ್ಟ್ರಲ್ಲೇ ಇದೆ. ಆದ್ರೂ 2014ರ ಲೋಕಸಭೆ ಚುನಾವಣೆ ಟೈಮ್ನಲ್ಲಿ ಮೋದಿ ಅತೀ ಹೆಚ್ಚು ಹೇಳಿದ್ದು ಕಪ್ಪು ಹಣದ ಬಗ್ಗೆ. ವಿದೇಶದಲ್ಲಿರೋ ಕಪ್ಪು ಹಣನಾ ಅಧಿಕಾರಕ್ಕೆ ಬಂದ್ರೆ 100 ದಿನದಲ್ಲಿ ವಾಪಸ್ ತರ್ತೀನಿ ಅಂತ ಹೇಳಿದ್ರು. ಅಲ್ಲ... ಭರವಸೆ ಕೊಟ್ರು. ತಾಂತ್ರಿಕವಾಗಿ ಅದು ಸಾಧ್ಯ ಇಲ್ಲ ಅನ್ನೋದು ಮೋದಿ ಭಾಷಣ ಕೇಳಿದ ಮತ್ತು ಕೇಳದವರಿಗೂ ಗೊತ್ತಿರೋ ವಿಷ್ಯವೇ. ಆದ್ರೂ ‘ಅದನ್ನ ನಾವೆಲ್ಲಾ ನಂಬಿದ್ವಿ'.

ಈಗ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನ ಕಳೆದಾಯ್ತು. ಆದ್ರೆ ಇನ್ನೂ ವಿದೇಶದಲ್ಲಿರೋ ಕಪ್ಪು ಹಣ ಮಾತ್ರ ಭಾರತಕ್ಕೆ ಬಂದಿಲ್ಲ. ಬಹುಶಃ ಇನ್ನೂ ಹಲವು ತಿಂಗಳು ಅಥವಾ ಹಲವು ವರ್ಷಗಳಾದ್ರೂ ಆ ಬ್ಲಾಕ್ ಮನಿ ವಾಪಸ್ ಬರುತ್ತೆ ಅನ್ನೋ ನಂಬಿಕೆನೂ ಇಲ್ಲ. ಆದ್ರೂ ಕೆಲವರು ಇನ್ನೂ ಅದೇ ಹಳೇ ಗುಂಗಿನಲ್ಲೇ ಇದ್ದಾರೆ. ತಡವಾದ್ರೂ ನಮ್ಮ ಮೋದಿ ಕಪ್ಪು ಹಣವನ್ನ ಭಾರತಕ್ಕೆ ತಂದೇ ತರ್ತಾರೆ ಅಂತ ನಂಬಿದ್ದಾರೆ. ಇನ್ನು ಕೆಲವರು ಇದು ಸಾಧ್ಯವೇ ಇಲ್ಲ ಅಂತಲೂ ವಾದ ಮಾಡ್ತಾ ಇದ್ದಾರೆ. ಯಾವ್ದು ಏನೇ ಆದ್ರೂ, ಮೋದಿ ಮಾತ್ರ ತಮ್ಮ ಅದೇ ಲಹರಿಯಲ್ಲಿ ಜೋರು ಭಾಷಣಗಳಲ್ಲಿ, ಹಲವು ರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಚಾರಗಳಲ್ಲಿ ಬ್ಯುಸಿ... ಬ್ಯುಸಿ... ಬ್ಯುಸಿ...

ಅಂದ್ಹಾಗೆ... ನೋಡ ನೋಡ್ತಿದ್ದಂತೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೀಯೋಕೆ ಸ್ವಲ್ಪವೇ ಸಮಯ ಉಳಿದಿದೆ. ಇನ್ನು ಹಾಗೇ, ಬಯ್ಯುತ್ತಾ, ಅವ್ರನ್ನ ಇವ್ರು, ಇವ್ರನ್ನ ಅವ್ರು ಟೀಕಿಸ್ತಾ ಅದ್ಹೇಗೋ ಕಣ್ಮುಚ್ಚಿ ತೆಗಿಯೋದ್ರೊಳಗೆ 5 ವರ್ಷನೂ ಪೂರ್ಣಗೊಳಿಸೇ ಬಿಡ್ತಾರೆ. ಆದ್ರೆ ಚುನಾವಣೆಯ ಪ್ರಚಾರದ ವೇಳೆ ನೀಡಿದ ಅದಷ್ಟೋ ಭರವಸೆಗಳು ಇನ್ನೂ ಹಾಗೇ ಇರ್ತವೆ. ಆಗ ಮತ್ತೆ ಇವ್ರುಗಳೇ ನಮ್ಮ ಮುಂದೆ ಪ್ರತ್ಯಕ್ಷರಾಗ್ತಾರೆ. ಆಗ ನಮ್ಮ ಮತ್ತೆ ಮೋದಿ ಆಥವಾ ಮೋದಿಯಂಥವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇನ್ನು ಹಲವು ಘಟಾನುಘಟಿ ನಾಯಕರು ಮತ್ತೆ ಪ್ರತ್ಯಕ್ಷವಾಗ್ತಾರೆ. ಅದೇ ಭರವಸೆಗಳು, ಆಶ್ವಾಸನೆಗಳು, ಕೆಲವರು ವುಲನ್ ಟೋಪಿ, ಹಲವರು ಮಕಮಲ್ ಟೋಪಿ. ಬದಲಾವಣೆಯನ್ನು ಬಯಸುವ ನಮ್ಮ ಬುದ್ಧಿವಂತ ಮತದಾರ ತಾನು ಮಾತ್ರ ಬದಲಾಗದೇ ಮತ್ತೆ ಮತ್ತೆ ತನ್ನ ತಲೆ ಹೊಸ ಟೋಪಿಗಾಗಿ ಸಿದ್ಧಪಡಿಸ್ಕಂಡೇ ಇರ್ತಾನೆ...


ನವೀ...