Tuesday, April 8, 2014

ಇವಳು ಅಮ್ನಾ ಭಟ್ಟಿ, ಪಾಕಿಸ್ತಾನದವಳು..

  My Article published in Avadi on April-4, 2014

ಇವಳು ಅಮ್ನಾ ಭಟ್ಟಿ, ಪಾಕಿಸ್ತಾನದವಳು..

April 4, 2014
by user2

ನವೀನ್ ಕುಮಾರ್ ಕೆ

ಜೀತ ಪದ್ದತಿಯ ಬಗ್ಗೆ ಎಷ್ಟೆಲ್ಲಾ ಹೋರಾಟಗಳು, ಎಷ್ಟೆಲ್ಲಾ ಪ್ರಯತ್ನಗಳ ನಂತರ ಅದಕ್ಕೆ ಜಾಗತಿಕವಾಗಿ ಮುಕ್ತಿ ಸಿಕ್ಕಿತ್ತು. ಆದರೆ ನಿಜವಾಗಿಯೂ ಜೀತ ಪದ್ದತಿ ಇಂದು ನಮ್ಮಲ್ಲಿ ಇಲ್ಲವೆ? ಜನರು ನಿಜವಾಗಿಯೂ ಇದರ ಕೂಪದಿಂದ ಹೊರ ಬಂದಿದ್ದಾರೆಯೇ? ಬಂದಿಲ್ಲ ಅಂದರೆ ಜೀತ ಪದ್ದತಿ ಈಗ ಯಾವ ರೂಪದಲ್ಲಿ ಇದೆ? ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಜೀತ ಅನ್ನೋದು ಹಿಂದುಳಿದ ದೇಶಗಳಲ್ಲಂತೂ ಕಂಡೂ ಕಾಣದಂತೆ ಹೆಮ್ಮರವಾಗಿ ಬೆಳೆದು ನಿಂತಿದೆ. ಅಥವಾ ಇದರ ಬಗ್ಗೆ ಗೊತ್ತಿದ್ದರೂ, ಅಲ್ಲಿನ ಕಾನೂನು, ಆಡಳಿತ ಇದನ್ನು ನಿರ್ಲಕ್ಷಿಸಿವೆ.  ಇದು ಇಂದು ನಮ್ಮ ಮುಂದಿರುವ ಕಠೋರ ಸತ್ಯ.
ಇದಕ್ಕೆ ಉತ್ತಮ ಉದಾಹರಣೆ ನಮ್ಮ ನೆರೆಯ ದೇಶ ಪಾಕಿಸ್ತಾನ. ಪಾಕಿಸ್ತಾನ ಎಂದ ಕೂಡಲೇ ನಾವು ಮೈ ಮೇಲೆ ಹಾವು ಹರಿದಂತೆ ಆಡುತ್ತೇವೆ. ಆದರೆ ಅಲ್ಲಿರುವವರು ಮನುಷ್ಯರೇ. ಅವರಿಗೂ ಮನಸ್ಸಿದೆ, ಕಷ್ಟ ಸುಖಗಳಿವೆ ಎಂಬುದನ್ನು ಆಲೋಚಿಸುವುದೇ ಇಲ್ಲ. ಸರಿ, ಯಾವುದೋ ರಾಜಕೀಯ ಕಾರಣಕ್ಕೆ ಅಥವಾ ರಕ್ಷಣೆಯ ಕಾರಣಕ್ಕೆ ನಾವು ನಮ್ಮ ನೆರೆಯ ದೇಶಗಳನ್ನು ಎಚ್ಚರಿಕೆಯಿಂದ ಗಮನಿಸುವುದು ಉತ್ತಮವೇ. ಆದರೆ ಬರೀ ದ್ವೇಷವನ್ನೇ ತುಂಬಿಕೊಳ್ಳುವುದು ಎಷ್ಟು ಸೂಕ್ತ? ಇದು ಕೇವಲ ನನಗೋ, ನಿಮಗೋ ಅಥವಾ ಭಾರತೀಯರಿಗಷ್ಟೇ ಸಂಬಂಧಿಸಿದ್ದಲ್ಲ. ಎರಡೂ ದೇಶಕ್ಕೆ ಸಂಬಂಧಿಸಿದ್ದು. ಇನ್ನು ನಾನು ಇಲ್ಲಿ ಹೇಳ ಹೊರಟಿರುವ ಜೀಪ ಪದ್ದತಿ ಅಥವಾ ಗುಲಾಮ ಪದ್ದತಿ ಈಡೀ ಜಗತ್ತಿಗೇ ಸಂಬಂಧಿಸಿದ್ದು.
ಪಾಕಿಸ್ತಾನದಲ್ಲಿ ಸಾವಿರಾರು ಜನ ಇಂದಿಗೂ ಈ ಗುಲಾಮ ಪದ್ದತಿಯಿಂದ ಮುಕ್ತಿ ಪಡೆದಿಲ್ಲ. ಅದರಲ್ಲೂ ಈ ಬಾಲಿಶತನಕ್ಕೆ ಬಲಿಯಾಗುತ್ತಿರುವುದು ಮಹಿಳೆಯರು ಎಂಬುದು ದು:ಖಕರ ಸಂಗತಿ. ಆದರೆ ಇಲ್ಲಿ ಜೀತ ಪದ್ದತಿ ಅಥವಾ ಗುಲಾಮಗಿರಿ ಅನ್ನೋದು ನೇರವಾಗಿ ನಡೆಯೋದಿಲ್ಲ. ಅದು ತನ್ನ ಚಹರೆಯನ್ನು ಬದಲಿಸಿಕೊಂಡಿದೆ. ಇಲ್ಲಿನ ಇಟ್ಟಿಗೆ ಫ್ಯಾಕ್ಟರಿ, ಕಾರ್ಪೆಟ್ ತಯಾರಿಕಾ ಕಂಪನಿಗಳು ಮತ್ತು ಕೃಷಿಯಲ್ಲಿ ಇಂದಿಗೂ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಅವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಯಾವ ಸಕರ್ಾರವೂ, ಯಾವ ಕಾನೂನೂ ಕಿವಗೆ ಹಾಕಿಕೊಂಡಿಲ್ಲ. ಇನ್ನು ಇದನ್ನೆಲ್ಲಾ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವುದಂತೂ ದೂರದ ಮಾತು.
ಇವರೆಲ್ಲಾ ಈ ಪಡಂಭೂತಕ್ಕೆ ಬಲಿಯಾಗುತ್ತಿರೋದು, ಬಂಧಿತ ಕಾರ್ಮಿಕರಾಗಿ. ಗುಲಾಮಗಿರಿ ತನ್ನ ಮುಖವಾಡವನ್ನು ಬಾಂಡೆಡ್ ಲೇಬರ್ ರೂಪದಲ್ಲಿ ಬದಲಿಸಿಕೊಂಡು ಇವರ ಮೇಲೆ ಇಂದಿಗೂ ಹೇರಲ್ಪಟ್ಟಿದೆ. ಕುಟುಂಬದ ಯಜಮಾನರ್ಯಾರೋ ಮಾಡುವ ಸಾಲವನ್ನು ತೀರಿಸೋದಕ್ಕಾಗಿ ಇವರು ತಮ್ಮ ಜೀವನ ಪೂರ್ತಿ ಅವರ ಒಡೆಯರ ಕಣ್ಗಾವಲಲ್ಲೇ ಕಳೆಯಬೇಕು. ಗಂಡ ಯಾವುದೋ ಕಾರಣಕ್ಕೆ ಸಾಲ ಮಾಡಿಕೊಂಡು, ಅಚಾನಕ್ಕಾಗಿ ಮೃತಪಟ್ಟರೆ, ಆತನ ಹೆಂಡತಿ ಜೀವನ ಪೂರ್ತಿ ಸಾಲ ಕೊಟ್ಟವನ ಅಡಿಯಾಳು. ಇದು ಇಲ್ಲಿಗೇ ಮುಗಿಯುವುದಿಲ್ಲ. ಆಕೆಯ ನಂತರ ಮತ್ತೆ, ಆಕೆಯ ಮಕ್ಕಳು, ಅವರ ಹೆಂಡಿರು ಹೀಗೇ ಕೊಂಡಿ ಬೆಳೆಯುತ್ತಾ ಸಾಗುತ್ತದೆ. ಆದರಲ್ಲೂ ಈ ಜೀತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಮಹಿಳೆಯರು.
ಆಮ್ನಾ ಭಟ್ಟಿ ಅನ್ನೋ ಮಹಿಳೆ ತನ್ನ ಅರ್ಧ ಆಯುಷ್ಯವನ್ನು ಜೀತ ಮಾಡುವುದರಲ್ಲೇ ಕಳೆದು ಬಿಟ್ಟಿದ್ದಾಳೆ. 60 ವರ್ಷದ ಆಮ್ನಾ ಮೊಟ್ಟ ಮೊದಲು ಬಂಧಿತ ಕಾರ್ಮಿಕಳಾಗಿ ಇಟ್ಟಿಗೆಯ ಭಟ್ಟಿಗೆ ಬಂದಾಗ ಆಕೆಯ ವಯಸ್ಸು, ಬರೀ 10 ವರ್ಷ. ಅಂದು ತನ್ನ ತಂದೆ ಮಾಡಿದ್ದ ಸಾಲವನ್ನು ತೀರಿಸೋದಕ್ಕಾಗಿ ಇಲ್ಲಿ ಕೆಲಸಕ್ಕೆ ಸೇರಿದಾಕೆ, ಇಂದಿಗೂ ದುಡಿಯುತ್ತಲೇ ಇದ್ದಾಳೆ. ತಂದೆಯ ನಂತರ ಗಂಡ ಮಾಡಿದ ಸಾಲವನ್ನು ತೀರಿಸೋದು, ಅದೂ ಆದ ಮೇಲೆ ತಾನೇ ಮಾಡಿಕೊಂಡ ಸಾಲವನ್ನು ತೀರಿಸೋದು, ಹೀಗೆ ಒಂದಿಲ್ಲೊಂದು ಕೋಲಕ್ಕೆ ಕೈ ಒಡ್ಡುತ್ತಾ ತನ್ನ ಜೀವನವನ್ನು ಜೀತದಾಳಾಗಿ ಈಕೆ ಕಳೆದುಬಿಟ್ಟಿದ್ದಾಳೆ. ತನ್ನ ಮೇಲಿದ್ದ ಎರಡೂ ವರೆ ಲಕ್ಷ ಸಾಲವನ್ನು ತೀರಿಸಲು ಕೆಲಸಕ್ಕೆ ಬಂದಳು, ಇಲ್ಲಿಯವರೆಗೂ ಆಕೆ ತೀರಿಸಿರೋದು ಬರೀ ಒಂದು ಲಕ್ಷ ಮಾತ್ರ. ದಿನವೆಲ್ಲಾ ಕಷ್ಟ ಪಟ್ಟು ದುಡಿದರೆ ಇವರ ಕಷ್ಟದ ಪ್ರತಿಫಲ 350 ರೂಪಾಯಿ ಮಾತ್ರ. ಇದರಲ್ಲೇ ಸಾಲವನ್ನು ತೀರಿಸಿ, ಕುಟುಂಬ ನಿರ್ವಹಣೆಯನ್ನು ಮಾಡಬೇಕಾದ ಅನಿವಾರ್ಯತೆ ಇವರದು. ಹಾಗಾಗಿ ಇರುವ ಸಾಲವನ್ನು ತೀರಿಸೋದು ದೂರದ ಮಾತು ಬದುಕಲು ಮತ್ತೆ ಹೊಸ ಸಾಲವನ್ನು ಮಾಡಲೇಬೇಕಾದ ಪರಿಸ್ಥಿತಿ. ಬೇರೆ ದಾರಿ ಇಲ್ಲದೆ ಸಾಲ ಮಾಡುತ್ತಾರೆ. ಅದನ್ನು ತೀರಿಸಲು ಸಾಧ್ಯವಾಗದೇ ಮತ್ತೆ ಅಲ್ಲೇ ಕೆಲಸ ಮಾಡುತ್ತಾರೆ. ಹಾಗಾಗಿ ಅವರು ಬದುಕಿರುವಷ್ಟು ಕಾಲವೂ ಒಡೆಯರ ದಬ್ಬಾಳಿಕೆಯಡಿ, ಅವರ ಕಾಲ ಕಸದಂತೆ ಬದುಕುವುದು ಇವರಿಗೆ ತಪ್ಪಿದ್ದಲ್ಲ. ಇನ್ನು ಇಲ್ಲಿಂದ ತಪ್ಪಿಸಿಕೊಂಡು ಹೋಗಲೂ ಇವರಿಗೆ ಸಾಧ್ಯವಿಲ್ಲ. ಸದಾ ಇವರ ಮೇಲೆ ನಿಗಾ ಇಡಲಾಗಿರುತ್ತದೆ. ನಾವು ಬಡವರಾಗಿ ಹುಟ್ಟಿದ್ದೇವೆ, ಸಾಯುವವರೆಗೂ ಬಡವರಾಗೇ ಇರುತ್ತೇವೆ, ನಮ್ಮ ಹಣೆ ಬರಹ ಬದಲಾಗುವುದಿಲ್ಲ ಅನ್ನೋದು ಆಮ್ನಾ ಭಟ್ಟಿಯವರ ದು:ಖದ ನುಡಿಗಳು.
ಇನ್ನು ಈ ಜೀತ ಪದ್ದತಿಗೆ ದಾರಿ ಮಾಡಿಕೊಡುತ್ತಿರುವ ಮತ್ತೊಂದು ಕಾರಣವೆಂದರೆ ಹ್ಯೂಮನ್ ಟ್ರಾಫಿಕಿಂಗ್. ಹೌದು ಮಾನವ ಸಾಗಣೆಯೂ ಇಂದು ತನ್ನ ಬೇರುಗಳನ್ನು ತುಂಬಾ ಆಳವಾಗಿ ಚಾಚಿಕೊಂಡಿದೆ. ಈ ಕರಾಳ ದಂಧೆಯನ್ನು ಕಾನೂನು ನಿಷೇಧಿಸಿದ್ದರೂ, ಅದು ತನ್ನ ಸ್ವರೂಪವನ್ನು ಬದಲಿಸಿಕೊಂಡು ಇಂದಿಗೂ ಮುಂದುವರೆಯುತ್ತಿದೆ. ಬಹುತೇಕರು ಒಳ್ಳೆಯ ಉದ್ಯೋಗ ಪಡೆಯುವ ಉದ್ದೇಶದಿಂದ ಸಾಲ ಪಡೆದು ಹಣ ಕಟ್ಟುತ್ತಾರೆ. ಆದರೆ ಮಧ್ಯವರ್ತಿಗಳು ಇವರಿಗೆ ಉದ್ಯೋಗ ಆಸೆ ತೋರಿಸಿ, ಇವರನ್ನು ಮಾರಾಟ ಮಾಡುತ್ತಾರೆ. ಇನ್ನು ಉತ್ತಮ ನೌಕರಿಯ ಕನಸು ಹೊತ್ತು ವಿದೇಶಕ್ಕೆ ಹಾರುವ ಈ ಅಮಾಯಕರು, ಅತ್ತ ಕೆಲಸವೂ ಇಲ್ಲದೆ, ಮಾಡಿದ ಸಾಲವನ್ನು ತೀರಿಸಲೂ ಆಗದೇ, ಕೊನೆಗೆ ಜೀವನ ಪೂರ್ತಿ ಗುಲಾಮರಾಗಿ ಬಾಳುವ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಹೀಗೆ ಗುಲಾಮರಾಗಿಸಿಕೊಂಡವರನ್ನು, ಆಫ್ರಿಕಾ, ಕೆರಬಿಯನ್ ದೇಶಗಳು ಮತ್ತು ದಕ್ಷಿಣ-ಪೂರ್ವ ಏಷಿಯಾಗಳಲ್ಲಿ ಜೀತದಾಳುಗಳನ್ನಾಗಿ ಮಾಡಿಕೊಂಡು ದುಡಿಸಿಕೊಳ್ಳುತ್ತಾರೆ. ಇವರುಗಳು ಇಲ್ಲಿಂದ ತಪ್ಪಿಸಿಕೊಂಡು ಬರೋದಂತೂ ದುಸ್ಸಾಧ್ಯವೇ ಸರಿ. ಇವೆಲ್ಲದರ ಜೊತೆಜೊತೆಗೆ ದಕ್ಷಿಣ-ಪೂರ್ವ ಏಷಿಯಾದಲ್ಲಿ ಇಂದಿಗೂ ಜಾರಿಯಲ್ಲಿರುವ ಅನಿಷ್ಟ ಜಾತಿ ಪದ್ದತಿಯೂ ಸಹ ದಲಿತ ವರ್ಗದವರನ್ನು ಮೇಲ್ಜಾತಿ ಮತ್ತು ವರ್ಗದವರು ಅಡಿಯಾಳುಗಳಾಗಿಸಿಕೊಳ್ಳಲು ಸಹಕರಿಸುತ್ತಿದೆ. ಇನ್ನು ಭಾರತಕ್ಕೆ ಬರೋದಾದರೆ, ಇಂದಿಗೂ ಪಂಜಾಬಿನ ಅನೇಕ ಕಡೆಗಳಲ್ಲಿ ಈ ಬಾಂಡೆಡ್ ಲೇಬರ್ ಪದ್ದತಿ ಜಾರಿಯಲ್ಲಿರುವುದನ್ನು ನಾವು ಗಮನಿಸಬಹುದು. ಇಲ್ಲಿ ಗಂಡಸು, ಹೆಂಗಸು ಮಕ್ಕಳು ಎಂಬ ಬೇಧ, ಭಾವಗಳಿಲ್ಲದೆ, ಸಾವಿರಾರು ಮಂದಿ ಜೀತದಾಳುಗಳಾಗಿ ನಿತ್ಯವೂ ಕ್ವಾರಿಗಳಲ್ಲಿ, ಇಟ್ಟಿಗೆ ಭಟ್ಟಿಗಳಲ್ಲಿ ಮಾಲಿಕ ದೌರ್ಜನ್ಯದ ನಡುವೆಯೇ ರಕ್ತವನ್ನು ಬೆವರಿನಂತೆ ಬಸಿದು ದುಡಿಯುತ್ತಿದ್ದಾರೆ. ಆದರೂ ಇವರ ಸಾಲ ತೀರಿಲ್ಲ.
ಇವರ ಕಷ್ಟಗಳು ಕೊನೆಗೊಂಡಿಲ್ಲ. ಹೀಗೆ ನಿರಂತರವಾಗಿ ಮಹಿಳೆಯರ ಮೇಲೆ, ಮಕ್ಕಳ ಮೇಲೆ ಮತ್ತು ಶೋಷಿತ/ದಮನಿತ ವರ್ಗದ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು, ಶೋಷಣೆಗಳು ನಡೆಯುತ್ತಲ್ಲೇ ಇದೆ. ಇದು ಕೇವಲ ಪಾಕಿಸ್ತಾನ, ಭಾರತದ ಸಮಸ್ಯೆಯಲ್ಲ. ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ತಮ್ಮ ಸ್ವರೂಪಗಳನ್ನು ಬದಲಿಸಕೊಂಡಿವೆ. ಹಾಗೆಯೇ ಈ ಜೀತ/ಗುಲಾಮ ಪದ್ದತಿಯೂ ಕೂಡ. ಇಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅಂದಾಜಿಸುವ ಪ್ರಕಾರ ಕೇವಲ ಏಷಿಯಾ-ಪೆಸಿಫಿಕ್ ಪ್ರಾಂತ್ಯದಲ್ಲೇ ಸುಮಾರು 11.7 ಮಿಲಿಯನ್ ಜನರು ಈ ಬಾಂಡೆಡ್ ಲೇಬರ್ಗೆ ಬಲಿಪಶುವಾಗಿದ್ದಾರೆ. ಆದರೂ ಯಾವ ದೇಶದ ಕಾನೂನು, ಆಡಳಿತವೂ ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇನ್ನಾದರೂ ನಾವುಗಳು ಎಚ್ಚೆತ್ತುಕೊಂಡು ಇದನ್ನು ಸೂಕ್ಷ್ಮವಾಗಿ ಗಮನಿಸುವ ಅವಶ್ಯಕತೆ ಇದೆ. ಇದರ ವಿರುದ್ಧ ಸಿಡಿದೇಳದಿದ್ದರೆ, ಇಂದು ಯಾರನ್ನೋ ಕಂಡು ಮರುಕ ಪಡುತ್ತಿರುವ ನಮ್ಮನ್ನು ನೋಡಿ ಮುಂದೊಂದು ದಿನ ಬೇರೆಯವರು ಕನಿಕರ ಪಡುವಂಥ ಸ್ಥಿತಿ ಎದುರಾದೀತು.

ಚಿತ್ರ ಕೃಪೆ : ಮೊಹಮ್ಮದ್ ಮುಹೆಸಿನ್