Sunday, November 24, 2013

ನವೀನ್ ಕುಮಾರ್
ಇನ್ನಾದರೂ ನನ್ನನ್ನು ನನ್ನ ಇಚ್ಛೆಯಂತೆ ಬದುಕಲು ಬಿಡಿ… ಇದು ಆ ಮುದಿ ಜೀವದ ಎಷ್ಟೋ ವರ್ಷಗಳ ಕೂಗು. ಆದರೆ ಕೇಳುವರಾರು? ಎಂಬುದೇ ಆಕೆಯ ಪ್ರಶ್ನೆ. ಜೀವನದ ಕಷ್ಟ ಸುಖಗಳನ್ನು ಕೊನೆವರೆಗೂ ಹಂಚಿಕೊಳ್ಳುತ್ತೇನೆ ಎಂದು ಕೈ ಹಿಡಿದ ಗಂಡ ಅರ್ಧದಲ್ಲೇ ತನ್ನ ಪಯಣವನ್ನು ಮುಗಿಸಿ ನಡುನೀರಿನಲ್ಲಿ ಕೈ ಬಿಟ್ಟು ಹೋಗಿದ್ದ. ಇನ್ನು ಮಕ್ಕಳೋ, ಅವರ ಲೋಕ ಅವರದು. ನಿಷ್ಟ್ರಯೋಜಕರೇನಲ್ಲ. ಆದರೆ ಪ್ರಯೋಜಕರು ಎಂದು ಹೇಳಿಕೊಳ್ಳುವ ಮಟ್ಟಕ್ಕೂ ಇನ್ನು ಬೆಳೆದಿಲ್ಲ. ತಮ್ಮ ಜೀವನವನ್ನು ಸಾಗಿಸುವ ಸಾಮಥ್ರ್ಯವಿದೆ, ಆದರೆ ಇನ್ನು ಜೀವನವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹುಡುಗಾಟಿಕೆ ಬಿಟ್ಟಿಲ್ಲ, ಹೀಗೆಯೇ ಈಸಿ ಚೇರ್ನಲ್ಲಿ ಕುಳಿತು ಏನೇನೋ ಯೋಚಿಸುತ್ತಿದ್ದ ಆಕೆಗೆ ಯಾರೋ ಬಾಗಿಲು ಬಡಿದ್ದದ್ದು ಕೇಳಿ ಎಚ್ಚರವಾಯಿತು. ಯಾರಿರಬಹುದು ಎಂದು ಗೊಣಗಿಕೊಳ್ಳುತ್ತಲೇ ಕುಳಿತಲ್ಲಿಂದ ಎದ್ದು ಬಂದು ಬಾಗಿಲು ತೆರೆದಾಕೆಗೆ ಎದುರಿಗೆ ಕಂಡದ್ದು ಪೋಸ್ಟ್ಮಾನ್. ಅವನು ನೀಡಿದ ಒಂದು ಲಕೋಟೆಯನ್ನು ಪಡೆದು ಮತ್ತೆ ಬಾಗಿಲು ಮುಚ್ಚಿ ತನ್ನ ಆರಾಮ ಕುರ್ಚಿಯಲ್ಲಿ ಕುಳಿತು ಯೋಚಿಸತೊಡಗಿದಳು.
ಹಾಗೆಯೇ ಕಣ್ಣು ಮುಚ್ಚುತ್ತಿದ್ದಂತೆ ಅವಳೆದುರಿಗೆ ತನ್ನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲ ಘಟನೆಗಳೂ ಸಿನಿಮಾ ರೀಲಿನಂತೆ ಎದುರಿಗೆ ಬರತೊಡಗಿದವು. ಇನ್ನೂ ಹತ್ತನೇ ತರಗತಿ ಪಾಸಾಗಿರಲಿಲ್ಲ, ವಯಸ್ಸು ಹದಿನಾರು ಕೂಡ ದಾಟಿರಲಿಲ್ಲ. ಆಗಲೇ ಮನೆಯಲ್ಲಿ ಮದುವೆಯ ಒತ್ತಡ ಶುರುವಾಗಿತ್ತು. ಅದು ಹೇಗೋ ಕಾಡಿ ಬೇಡಿ, ರಂಪ ಮಾಡಿ, ಉಪವಾಸವಿದ್ದು ಏನೇನೋ ಕಷ್ಟಪಟ್ಟು ಅಂತೂ ಮದುವೆಯ ಪ್ರಸ್ತಾಪಗಳನ್ನು ನಿಲ್ಲಿಸಿದ್ದಾಯಿತು. ಓದು ಮುಂದುವರೆಸಲೂ ಪಟ್ಟ ಕಷ್ಟ ಅಷ್ಟಿಷ್ಟೇನಲ್ಲ. ಶಾಲೆಯಲಿ ಮಾಸ್ತರ್ ಆಗಿ ಕೆಲಸ ಮಾಡುತಿದ್ದ ಅಣ್ಣನೂ ತನ್ನ ಓದಿಗೆ ಬೆಂಬಲ ಕೊಡದೇ, ಹೆಣ್ಣು ಹುಡುಗಿಯರಿಗೇಕೆ ಹೆಚ್ಚಿನ ಓದು, ಮದುವೆ ಮಾಡಿಕೊಂಡು ಹೋಗೋದು ಬಿಟ್ಟು, ಎಂದು ಬೈಯೋದು. ಆದರೂ ತನ್ನ ಓದುವ ಆಸೆಗೆ ಇತಿಶ್ರೀ ಹಾಡದೆ, ಹೇಗೋ ಮನೆಯವರನ್ನು ಒಪ್ಪಿಸಿ ಓದು ಮುಂದುವರೆಸಿದ್ದು, ದೊಡ್ಡ ಸಾಹಸವೇ ಆಗಿತ್ತು. ಅಂತೂ ಹೇಗೋ ಎಸ್.ಎಸ್.ಎಲ್.ಸಿ. ಪಾಸ್ ಮಾಡಿಕೊಂಡು ಪಿ.ಯು.ಸಿ ಮೆಟ್ಟಿಲು ಏರಿದಾಗ ಆದ ಸಂತೋಷ ಅಷ್ಟಿಷ್ಟಲ್ಲ.
ಪಿ.ಯು. ಮೊದಲ ವರ್ಷ ಮುಗಿಯುತ್ತಿದ್ದಂತೆ ಮತ್ತೆ ಮನೆಯವರಿಂದ ಮದುವೆಯ ಕ್ಯಾತೆ. ತನಗೋ ಈಗಲೇ ಮದುವೆಯಾಗುವ ಆಲೋಚನೆಗಳೇ ಇಲ್ಲ. ಇನ್ನೂ ಓದಬೇಕು. ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಆಸೆ. ಆದರೆ ಮನೆಯಲ್ಲಿ ಇದಕ್ಕೆ ಬೆಂಬಲ ಕೊಡುವವರ್ಯಾರು? ಆಗಲೇ ಹೈಸ್ಕೂಲ್ ಓದುವಾಗ ಕಲಿತ ಟೈಪ್ರೈಟಿಂಗ್ ನೆರವಿಗೆ ಬಂದದ್ದು. ಯಾವುದೋ ಸರ್ಕಾರಿ ಕಛೇರಿಯಲ್ಲಿ ದಿನಗೂಲಿ ನೌಕರಳಾಗಿ ಕೆಲಸ ಮಾಡುತಿದ್ದ ಗೆಳತಿಯೊಬ್ಬಳು ಅದೇ ಕಛೇರಿಯಲ್ಲಿ ಟೈಪಿಸ್ಟ್ನ ಅವಶ್ಯಕತೆ ಇದೆ ಎಂದಾಗ ಆಕೆ ತನಗೆ ಸಾಕ್ಷಾತ್ ವರಮಹಾಲಕ್ಷ್ಮಿಯಂತೆಯೇ ಕಂಡಿದ್ದಳು. ಖುಷಿಯಿಂದ ಮನೆಗೆ ಹೋಗಿ ವಿಷಯ ಹೇಳಿದರೆ ಹೆಣ್ಣು ಮಗಳು, ಅದರಲ್ಲೂ ಬ್ರಾಹ್ಮಣರ ಮನೆ ಹುಡುಗಿ ಹೊರ ಹೋಗಿ ದುಡಿಯುವುದೇ? ಸಾಧ್ಯವೇ ಇಲ್ಲ ಎಂದು ಅಪ್ಪ ಖಡಾಖಂಡಿತವಾಗಿ ಹೇಳಿದ್ದು ಕೇಳಿ ತನ್ನ ಆಸೆಯಲ್ಲಕ್ಕೂ ತಣ್ಣೀರೆರಚಿದಂತಾಗಿತ್ತು. ಆದರೂ ಪಟ್ಟು ಬಿಡದೆ, ಕಾಡಿ ಬೇಡಿ ತನ್ನ ಸ್ನೇಹಿತೆಯಿಂದಲೂ ಹೇಳಿಸಿ ಅದು ಹೇಗೋ ಅಪ್ಪನನ್ನು ಒಪ್ಪಿಸುವುಷ್ಟರಲ್ಲಿ ಸಾಕುಬೇಕಾಗಿತ್ತು. ಒಪ್ಪಿಕೊಂಡರೂ ಅಪ್ಪ ಸುಮ್ಮನೆ ಒಪ್ಪಿದ್ದರೆ. ನೂರೊಂದು ಕಂಡೀಷನ್ಗಳು. ಇಷ್ಟೊತ್ತಿಗೆ ಮುಂಚೆ ಬರಲು ಸಾಧ್ಯವಿಲ್ಲ. ಸಂಜೆ ಐದು ಗಂಟೆಗೆಲ್ಲಾ ಮನೆಯಲ್ಲಿರಬೇಕು. ಒಬ್ಬಳೇ ಹೋಗೋ ಹಾಗಿಲ್ಲ. ಅದು ಇದು ಏನೇನೋ ಹೇಳಿದ್ದಾವುದೂ ನನ್ನ ಕಿವಿಗೇ ಬಿದ್ದಿರಲಿಲ್ಲ. ಇನ್ನಾದರೂ ನನಗೆ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿತಲ್ಲ ಎಂಬ ಖುಷಿಯೊಂದೇ ಇದ್ದದ್ದು.

ಮೊದಲ ದಿನ ಕೆಲಸಕ್ಕೆ ಹೋದಾಗ ಆದ ಆನಂದ ಅಷ್ಟಿಷ್ಟಲ್ಲ. ಆದರೆ ಬರಬರುತ್ತಾ ಅಲ್ಲೂ ಒತ್ತಡಗಳಿದ್ದವು. ಜೊತೆಗೆ ಅರ್ಧಕ್ಕೆ ನಿಲ್ಲಿಸಿದ ಓದನ್ನೂ ಮುಂದುವರೆಸಿದ್ದು. ಹೇಗೋ ಎಲ್ಲವನ್ನೂ ಸರಿದೂಗಿಸಿಕೊಂಡು ಕೊನೆಗೂ ಒಂದು ಡಿಗ್ರಿ ಅಂತ ಪಡೆದುಕೊಂಡದ್ದಾಯಿತು. ಮಾಡುತಿದ್ದದ್ದು ಸಕರ್ಾರಿ ಕಛೇರಿಯ ಕೆಲಸವೇ ಆದರೂ ದಿನಗೂಲಿ ನೌಕರಳಾಗಿ. ಓದು ಮುಗಿಯಿತು ಈಗಲಾದರೂ ಮದುವೆ ಮಾಡಿಕೋ ಎಂಬ ಮಾತುಗಳು ಮತ್ತೆ ಮನೆಯಲ್ಲಿ ಕಿರಿಕಿರಿಯನ್ನುಂಟು ಮಾಡಲಾರಂಭಿಸಿದವು. ಕೊನೆಗೂ ಹೇಗೋ ಸರಿ ಎಂದು ಒಪ್ಪಿಕೊಂಡೆ. ಅಷ್ಟೊತ್ತಿಗಾಗಲೇ ಅಣ್ಣ ನಮ್ಮಿಂದ ದೂರಾಗಿದ್ದ. ತನ್ನ ಸಂಸಾರದೊಂದಿಗೆ ಬೇರೆ ಬದುಕುತಿದ್ದ. ಅಪ್ಪ, ಅಮ್ಮನನ್ನು ಒಂಟಿಯಾಗಿ ಬಿಟ್ಟು ಹೋಗುವ ಮನಸಿಲ್ಲ. ಆದರೆ ಮದುವೆಯ ಒತ್ತಡ ಇದ್ದದ್ದೇ ಅವರಿಂದ, ಅದಕ್ಕೇ ಒಪ್ಪಿಕೊಂಡದ್ದಾಯಿತು. ಎರಡು ಮೂರು ಸಂಬಂಧಗಳು ಬಂದರೂ ಯಾವುದೂ ಒಪ್ಪಿಗೆಯಾಗಿರಲಿಲ್ಲ. ಸರಿ, ಸ್ವಲ್ಪದಿನ ಇದನ್ನೆಲ್ಲಾ ನಿಲ್ಲಿಸಿ ಎಂದು ಹೇಳೋಣ ಎಂದುಕೊಳ್ಳುತ್ತಿರುವಾಗಲೇ ಅಪ್ಪನಿಗೆ ಪಾಶ್ರ್ವವಾಯು ಬರಸಿಡಿಲಿನಂತೆ ಬಂದೆರಗಿತ್ತು. ಅಮ್ಮನಿಗೂ ವಯಸ್ಸಾಗಿತ್ತು ಬೇರೆ. ಮನೆ ಕೆಲಸ, ಆಫೀಸ್, ಅಪ್ಪನ ಆರೋಗ್ಯ ಇವುಗಳಲ್ಲಿ ಮದುವೆಯ ವಿಚಾರವನ್ನು ತಾನೂ ಮರೆತುಬಿಟ್ಟಳು, ಮನೆಯಲ್ಲೂ ಯಾರೂ ಅದರ ಬಗ್ಗೆ ಮಾತನಾಡಲಿಲ್ಲ. ಹೇಗೋ ಎರಡು ವರ್ಷ ಕಳೆಯುವಷ್ಟರಲ್ಲಿ ತೀರ ನಿಶಕ್ತನಾಗಿದ್ದ ಅಪ್ಪನೂ ಅಗಲಿಹೋದ. ಈಗ ಅಮ್ಮನ ಮತ್ತು ಮನೆಯ ಸಂಪೂರ್ಣ ಜವಾಬ್ದಾರಿ ತನ್ನ ಮೇಲೇಯೇ ಬಿದ್ದಿತ್ತು. ಆದರೆ ಈಗ ಅಮ್ಮ ಮದುವೆಯ ಜಪ ಮಾಡಲು ಶುರುವಿಟ್ಟಿದ್ದಳು.
ಸರಿ ಎಂದು ಒಪ್ಪಿಕೊಂಡೆ. ಒಂದೆರಡು ವರ್ಷಗಳಲ್ಲಿ ಮದುವೆಯೂ ಆಯಿತು. ಗಂಡನಿಗೆ ನನ್ನೂರಲ್ಲೇ ಕೆಲಸ ಸಿಕ್ಕದ್ದು, ನಾನು ಮನೆಯಿಂದ ದೂರವಾಗದಂತೆ ಮಾಡಿದ್ದೊಂದೇ ಆಗ ನನಗೆ ಖುಷಿಕೊಟ್ಟ ವಿಚಾರ ಅನಿಸುತ್ತದೆ. ಅಷ್ಟೊತ್ತಿಗಾಗಲೇ ಅಣ್ಣನೂ ವಾಪಾಸ್ ಬಂದಿದ್ದ. ನನ್ನ ಸಂಸಾರ, ಜೊತೆಗೆ ಅಮ್ಮನ ಆರೋಗ್ಯ, ಕೆಲಸ, ಮದುವೆಯಾದ ನಾಲ್ಕು ವರ್ಷಗಳಲ್ಲೇ ಎರಡು ಮಕ್ಕಳು, ಅವರ ಆರೈಕೆ ಇದೇ ನಿತ್ಯ ಕಾಯಕದಂತಾಗಿ ಹೋಗಿತ್ತು. ಇವುಗಳ ಮಧ್ಯೆ ಮತ್ತೊಂದು ಸಂತೋಷದ ಸಂಗತಿಯೆಂದರೆ ಸುಮಾರು ವರ್ಷಗಳ ನಂತರ ತನ್ನನ್ನು ಖಾಯಂ ನೌಕರಳಾಗಿ ಪರಿಗಣಿಸಿರುವ ಆದೇಶ ಬಂದದ್ದು. ಆಗಲೇ ತನ್ನ ಜೀವನಕ್ಕೆ ಒಂದು ನೆಲೆ ಸಿಕ್ಕಿದೆ ಎಂಬ ಭಾವ ಮತ್ತು ತಾನು ಅಂದುಕೊಂಡದ್ದನ್ನು ಸಂಪೂರ್ಣವಾಗಲ್ಲದ್ದಿದ್ದರೂ ಕೊಂಚಮಟ್ಟಿಗೆ ಸಾಧಿಸಿದ್ದೇನೆಂಬ ಭಾವ ಮೂಡಿತ್ತು. ಆದರೆ ಈಗಲೂ ತಾನಂದುಕೊಂಡ ಸ್ವಾತಂತ್ರ್ಯ ತನಗೆ ಸಿಕ್ಕಿರಲಿಲ್ಲ. ಜೀವನದ ಜಂಜಾಟಗಳೇನೂ ತಪ್ಪಿರಲಿಲ್ಲ. ಸಂಸಾರದ ಒತ್ತಡಗಳು, ಮಕ್ಕಳ ಓದು ಅವರ ಆರೋಗ್ಯ ಹೀಗೆ ಈಗಲೂ ತನ್ನ ಜೀವನವನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎನಿಸುತಿತ್ತು. ಸರಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಬಾಳತೊಡಿಗಿದೆ. ಮಕ್ಕಳೂ ಬೆಳೆದು ದೊಡ್ಡವರಾಗುತ್ತಿದ್ದರು. ಆಗ ಮತ್ತೊಂದು ಆಘಾತ, ಕೊನೆಯವರೆಗೂ ಜೊತೆಗಿರಬೇಕಾದವನು ಮಧ್ಯದಲ್ಲೇ ತನ್ನ ಜೀವನದ ಆಟ ಮುಗಿಸಿಹೋಗಿದ್ದ. ಆದರೆ ಧೃತಿಗೆಡುವ ಹಾಗಿಲ್ಲ. ಮಕ್ಕಳ ಭವಿಷ್ಯ ರೂಪಿಸಬೇಕು. ಅವರು ಒಂದು ನೆಲೆಯನ್ನು ಕಂಡುಕೊಳ್ಳುವವರೆಗೂ ತಾನು ಧೈರ್ಯದಿಂದರಬೇಕು, ಕಷ್ಟ ಪಡಲೇಬೆಂಬ ಛಲ ಹೇಗೋ ಇಲ್ಲಿಯವರೆಗೂ ನೂಕಿಸಿಕೊಂಡು ಬಂದಿದೆ. ಈಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಅವರೂ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ನಿರ್ವಹಣೆಗೆ ಬೇಕಾಗುವಷ್ಟು ಸಂಪಾದನೆಯನ್ನೂ ಮಾಡುತ್ತಿದ್ದಾರೆ.
ಈಗ ತಾನು ಒಂದಷ್ಟು ಸ್ವತಂತ್ರಳು. ಯಾರಿಗಾಗಿಯೋ, ಯಾರ ಅಧೀನದಲ್ಲೋ ಬದುಕುವ ಜರೂರು ಇನ್ನು ತನಗಿಲ್ಲ. ಇನ್ನಾದರೂ ಸ್ವೇಚ್ಛೆಯಿಂದ ಬದುಕಬೇಕು, ನಾನು ಬೇಕೆಂದುಕೊಂಡಿದ್ದ ಸ್ವಚ್ಛ ಗಾಳಿಯ ಆಹ್ಲಾದವನ್ನು ಸವಿಯಬೇಕು ಎಂದುಕೊಳ್ಳುತ್ತಿದ್ದವಳಿಗೆ, ಅಮ್ಮ ಹೊಟ್ಟೆ ಹಸಿಯುತ್ತಿದೆ, ಊಟಕ್ಕೆ ಬಡಿಸು ಎಂಬ ಕೂಗು ತನ್ನ ಆಲೋಚನೆಯ ಲೋಕದಿಂದ ಹೊರ ಬರುವಂತೆ ಮಾಡಿತ್ತು. ಮಗ ಊಟಕ್ಕೆ ಬಂದನೆಂದು ಅವನಿಗೆ ಬಡಿಸಲು ಎದ್ದವಳಿಗೆ ಮತ್ತೆ ಕಾಡಿದ್ದು, ನಿಜಕ್ಕೂ ನಾನೀಗ ಸ್ವತಂತ್ರಳೇ? ಎಂಬ ಪ್ರಶ್ನೆ. ಮತ್ತೆ ಮನದಾಳದಿಂದ ಹೊರ ಬಂದ ಕೂಗು, ‘ಇನ್ನಾದರೂ ನನ್ನನ್ನು ನನ್ನ ಇಚ್ಛೆಯಂತೆ ಬದುಕಲು ಬಿಡಿ’……

1 comment:

  1. My article in Avadhi online magazine published on 23rd Nov-13

    ReplyDelete